ಹುಬ್ಬಳ್ಳಿ: ಬಹುತೇಕ ಪಟ್ಟಣ, ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸುದ್ದಿ ಆಗುತ್ತಲೇ ಇದೆ. ಇದೀಗ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕಬೇಕಿದ್ದ ಮಹಾನಗರ ಪಾಲಿಕೆ ಕಣ್ಣು ಮುಚ್ಚಿ ಕುಳಿತಿದೆ ಎಂಬ ಆರೋಪಗಳು ಕೇಳಿಬಂದಿವೆ. ಪರಿಣಾಮ ಈಗ ಬಾಲಕರಿಬ್ಬರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ಪರಿಣಾಮ ಬಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿರುವ ಸ್ವರಾಜ್ ನಗರದಲ್ಲಿ ಅಮೀನುದ್ಧೀನ್ ಮುಲ್ಲಾ ಎಂಬ ಬಾಲಕನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಆತನ ಬಾಯಿಯ ಭಾಗಕ್ಕೆ ಶ್ವಾನಗಳು ಕಚ್ಚಿವೆ ಎಂದು ತಿಳಿದುಬಂದಿದೆ.
ಇನ್ನೋರ್ವ ಬಾಲಕನ ಮೇಲೆಯೂ ದಾಳಿ ಮಾಡಿದ್ದು, ಆ ಬಾಲಕನ ಮಾಹಿತಿ ಲಭ್ಯವಾಗಬೇಕಿದೆ. ಇನ್ನು, ಅವಳಿನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದ್ದರೂ ಕೂಡ ಸಂತಾನಹರಣ ಕಾರ್ಯಾಚರಣೆ ಮಾಡುವ ಪಾಲಿಕೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಬೀದಿ ನಾಯಿಗಳ ಉಪಟಳ ಹೆಚ್ಚಾಗಲು ಕಾರಣವಾಗಿದೆ ಅನ್ನೋದು ಸಾರ್ವಜನಿಕರ ಆಕ್ರೋಶದ ಮಾತಾಗಿದೆ. ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಓಡಾಡುವುದೇ ಕಷ್ಟವಾಗಿದ್ದು, ಬೀದಿ ನಾಯಿಗಳ ಹಾವಳಿಗೆ ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರು ಭಯಭೀತರಾಗಿದ್ದಾರೆ.
ಭಿಕ್ಷುಕಿಯನ್ನು ಕೊಂದೇಬಿಟ್ಟವು ರಕ್ಕಸ ಬೀದಿ ನಾಯಿಗಳು:ಈ ತಿಂಗಳ ಶುರುವಿನಲ್ಲಿ ಧಾರವಾಡದಲ್ಲಿಯೇ ಭಿಕ್ಷುಕಿಯನ್ನು ಬೀದಿ ನಾಯಿಗಳು ಕೊಂದು ಹಾಕಿರುವ ಘಟನೆ ನಡೆದಿತ್ತು. ಜಿಲ್ಲೆಯ ಉಪ್ಪಿನಬೆಟಗೇರಿ ಗ್ರಾಮದ ಖಬರಸ್ತಾನ ಬಳಿ ರಾತ್ರಿ ಭಿಕ್ಷುಕಿ ಮಲಗಿದ್ದಾಗ ನಾಯಿಗಳ ಗುಂಪೊಂದು ಮೇಲರಗಿ ದಾಳಿ ಮಾಡಿದ್ದವು. ಪರಿಣಾಮ ಆಕೆಯ ತೊಡೆ, ಕೈಗಳಿಗೆ ಗಾಯವಾಗಿ, ಸ್ಥಳದಲ್ಲೇ ಸಾವನ್ನಪ್ಪಿದ್ದಳು.