ಹುಬ್ಬಳ್ಳಿ:ಅನಾಥೆಯ ಬಾಳಿಗೆ ಹುಬ್ಬಳ್ಳಿಯ ಸೇವಾ ಭಾರತಿ ಟ್ರಸ್ಟ್ನ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರ ಬೆಳಕು ನೀಡಿತು. ಕಲ್ಯಾಣ ಕೇಂದ್ರದಲ್ಲಿಯೇ ಬೆಳೆದ ಯುವತಿಯೊಬ್ಬಳು ಇಂದು ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಎಲ್ಲರ ಗಮನ ಸೆಳೆಯಿತು.
ಅನಾಥೆಯ ಬಾಳಿಗೆ ಬೆಳಕಾದ ಸಂಘ ಪರಿವಾರ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿ ಬೆಳೆದ ಯುವತಿಯನ್ನು ಸಂಘ ಪರಿವಾರದ ಮುಖಂಡರು ಇಂದು ಧಾರೆ ಎರೆದುಕೊಟ್ಟರು. ಹುಬ್ಬಳ್ಳಿಯ ಸೇವಾ ಸದನದಲ್ಲಿ ನಡೆದ ಮದುವೆಯಲ್ಲಿ ಅನಾಥ ಯುವತಿ ಬಿಎ ಪದವೀಧರೆ ಸಾವಿತ್ರಿ, ಕುಮಟಾ ತಾಲೂಕಿನ ಅಜ್ಜಿಗದ್ದೆಯ ಕಂದವಳ್ಳಿ ಗ್ರಾಮದ ರೇವಂತ್ ಎಂಬುವರೊಂದಿಗೆ ಇಂದು ಸಪ್ತಪದಿ ತುಳಿಯುವ ಮೂಲಕ ಹೊಸಬಾಳಿಗೆ ಕಾಲಿಟ್ಟಳು.
ಪಿಯುಸಿ ಓದಿರುವ ರೇವಂತ್ ಸಾಹಿತ್ಯದೊಂದಿಗೆ ಕೃಷಿ ಕಾರ್ಯ ಮಾಡುತ್ತಿದ್ದಾರೆ. ಅನಾಥ ಯುವತಿಯನ್ನೇ ಮದುವೆಯಾಗಿ ಜೀವನ ನಡೆಸಬೇಕು ಎಂದುಕೊಂಡಿದ್ದ ರೇವಂತ್, ಹವ್ಯಕ ಸಮಾಜದ ಪ್ರಕಾರ ಸಾವಿತ್ರಿಯ ಕೈ ಹಿಡಿದಿದ್ದಾರೆ. ಸಾವಿತ್ರಿ ಹಾಗೂ ರೇವಂತ್ ಮದುವೆ ಸಮಾರಂಭದಲ್ಲಿ ಸಂಘ ಪರಿವಾರದ ಹಿರಿಯರೆಲ್ಲ ಭಾಗವಹಿಸಿ ನೂತನ ವಧು-ವರರಿಗೆ ಆಶೀರ್ವದಿಸಿದರು. ಹುಬ್ಬಳ್ಳಿಯಲ್ಲಿ ನಡೆದ ಈ ಸರಳ ವಿವಾಹ ಇದೀಗ ಆಕೆಯ ಬಾಳಿಗೆ ಹೊಸ ಅರ್ಥ ತಂದುಕೊಟ್ಟಿದೆ. ಹುಟ್ಟಿದಾಗಿನಿಂದ ಇಲ್ಲಿಯವರೆಗೆ ತಂದೆ-ತಾಯಿಯ ಆಸರೆಯಲ್ಲಿ ಬೆಳೆಯದೇ ಇದ್ದರೂ ಇದೀಗ ಅಂದುಕೊಂಡಂತೆ ಮದುವೆಯಾಗಿದೆ.
ಅನಾಥೆಯ ಬಾಳಿಗೆ ಬೆಳಕಾದ ಸಂಘ ಪರಿವಾರ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರವು ಯುವತಿಗೆ ಇಂದು ಮದುವೆ ಮಾಡುವ ಮೂಲಕ ಹೊಸ ಜೀವನಕ್ಕೆ ಬೀಳ್ಕೊಟ್ಟಿತು. ಸುಮಾರು ವರ್ಷಗಳಿಂದ ಆರ್ಎಸ್ಎಸ್ನ ಮಾತೃ ಛಾಯಾ ಬಾಲಕಲ್ಯಾಣ ಕೇಂದ್ರದಲ್ಲಿದ್ದ ಯುವತಿಗೆ, ಅಲ್ಲಿನ ಹಿರಿಯರೇ ಸೇರಿಕೊಂಡು ವರ ನೋಡಿ ಮದುವೆ ಮಾಡಿದ್ದಾರೆ.