ಧಾರವಾಡ: ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆ ಆಧರಿಸಿ ರಾಜ್ಯದೆಲ್ಲೆಡೆ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಮೋದಿಯವರು ದೇಶದ ಅಭಿವೃದ್ಧಿಯ ಅದ್ಭುತ ಕನಸುಗಾರರು ಎಂದು ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದಲ್ಲಿಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಜಿಲ್ಲೆಯ ನವಲಗುಂದದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ್‌ಧನ್ ಖಾತೆ ಬಡವರಿಗೆ ಬ್ಯಾಂಕ್ ಅಕೌಂಟ್ ಆರಂಭಿಸುವಂತೆ ಮಾಡಿದ ಯೋಜನೆ. ಈ ಯೋಜನೆ ದೇಶದ 48 ಕೋಟಿ ಜನರಿಗೆ ತಲುಪಿದೆ. ಕಾಂಗ್ರೆಸ್ ಪಕ್ಷ ಬಡವರಿಗೆ ಬ್ಯಾಂಕ್ ತೋರಿಸುವ ಕೆಲಸ ಮಾಡಿರಲಿಲ್ಲ. ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ಪಡೆದರೆ ಅಭಿವೃದ್ಧಿ ಹೆಚ್ಚಾಗುತ್ತದೆ. ಬಡವರಿಗೆ ಸ್ವಂತ ಕಾಲ ಮೇಲೆ ನಿಲ್ಲಲು ಅನುಕೂಲ ಆಗುತ್ತದೆ. ದೇಶದಲ್ಲಿ ಕುಡಿಯಲು ಶುದ್ಧವಾದ ನೀರು ಕೊಡದೇ ಇದ್ದುದಕ್ಕೆ ರೋಗಗಳು ಬರುತ್ತಿದ್ದವು. ಅದನ್ನು ನಿವಾರಣೆ ಮಾಡಲು ಜಲ ಜೀವನ ಮಿಷನ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಪ್ರಧಾನಿ ಮೋದಿ ಮಾಡಿದ್ದಾರೆ.
ರೋಗಮುಕ್ತ ಭಾರತ ಮೋದಿ ಅವರ ಕನಸು. ಅದಕ್ಕಾಗಿ ಎಲ್ಲರಿಗೂ ಶುದ್ಧ ನೀರು ಕೊಡುವುದಕ್ಕೆ ಮುಂದಾಗಿದ್ದಾರೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಅಂತಹ ಹಳ್ಳಿಗಳಿಗೆ ಒಂದೇ ವರ್ಷದಲ್ಲಿ ವಿದ್ಯುತ್ ಸಂಪರ್ಕ ಕೊಟ್ಟಿದ್ದಾರೆ. ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ವಿಶೇಷ ಯೋಜನೆಯನ್ನು ನಮ್ಮ ಸರ್ಕಾರ ಕೊಟ್ಟಿದೆ.
ಕಾಂಗ್ರೆಸ್ ಆಡಳಿತದಲ್ಲಿ ಏನೂ ಮಾಡಿಲ್ಲ. ಆದರೆ ಕೀಳು ಮಟ್ಟಕ್ಕೆ ಇಳಿದು ಆರೋಪಗಳನ್ನು ಮಾಡುತ್ತಿದ್ದಾರೆ. ಕೆಂಪಣ್ಣನಿಗೆ ಕಾಂಗ್ರೆಸ್‌ನವರೇ ಕುಳಿತು ಅರ್ಜಿ ಬರೆಸಿದ್ದಾರೆ. ಕಾಂಗ್ರೆಸ್ ಪಕ್ಷದವರು ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದು, ಜಾಮೀನಿನ ಮೇಲೆ ಹೊರಗಡೆ ಓಡಾಡುತ್ತಿದ್ದಾರೆ. ಅಂಥವರು ಈಗ ಬಿಜೆಪಿ ಆಡಳಿತ ವೈಖರಿಯ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತಾವು ಸಿಎಂ ಆಗೋದಕ್ಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತಾವು ಅಧಿಕಾರದಲ್ಲಿದ್ದ ಐದು ವರ್ಷ ಏನು ಮಾಡಿದ್ದಾರೆ ಹೇಳಲಿ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ ಜವಾಹರಲಾಲ್ ನೆಹರೂ ಕಾಂಗ್ರೆಸ್ ಸಹ ಅಲ್ಲ ಎಂದರು.
ಇದೊಂದು ತಾಯಿ ಮಕ್ಕಳ ಕಾಂಗ್ರೆಸ್. ತಾಯಿ ಮಕ್ಕಳಿಗೆ ನಿಷ್ಠೆ ತೋರಿಸಿದವರನ್ನು ಮಾತ್ರ ಪಕ್ಷದ ಪದಾಧಿಕಾರಿ ಮಾಡುತ್ತಾರೆ. ಸದ್ಯ ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ. 2024ರ ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸಮಾಪ್ತಿ ಆಗುತ್ತದೆ. 2024ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ ಎಂದು ಹರಿಹಾಯ್ದರು. ಮಹದಾಯಿ ಯೋಜನೆಗೆ ಡಿಪಿಆರ್‌ಗೆ ಅನುಮೋದನೆ ಆಗಿದೆ. ಪರಿಸರ ಸಚಿವಾಲಯದ ಅನುಮತಿ ಸಿಕ್ಕಿದೆ. ಈಗ ಅರಣ್ಯ ಸಚಿವಾಲಯದಿಂದ ಒಪ್ಪಿಗೆ ಹಂತದಲ್ಲಿದ್ದೇವೆ. ಕೂಡಲೇ ಟೆಂಡರ್ ಕರೆದು ಕೆಲಸ ಆರಂಭಿಸುತ್ತೇವೆ. ಮಹದಾಯಿಗೆ 1000 ಕೋಟಿ ರೂ. ಬಜೆಟ್‌ನಲ್ಲಿ ತೆಗೆದಿಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಒಂದು ಸೀಟಿಗಾಗಿ ಅಲೆಮಾರಿಯಂತೆ ಸಿದ್ದರಾಮಯ್ಯ ಓಡಾಟ: ಕಾರಜೋಳ ವ್ಯಂಗ್ಯ