ಧಾರವಾಡ:ಸಿ ಪಿ ಯೋಗೇಶ್ವರ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಏನನ್ನೂ ಮಾತನಾಡದೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಜಾರಿಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 26 ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಜಗದೀಶ್ ಶೆಟ್ಟರ್ ಅವರಿಗೆ ಮಾಧ್ಯಮದವರು ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ನಾನು ಧಾರವಾಡಕ್ಕೆ ಯುವಜನೋತ್ಸವದಲ್ಲಿ ಭಾಗವಹಿಸಲು ಬಂದಿದ್ದೇನೆ. ಮೊದಲು ಯುವಜನೋತ್ಸವ ಕಾರ್ಯಕ್ರಮ ಯಶಸ್ವಿಯಾಗಬೇಕು. ಆ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ.
ನಾನು ಬೆಳ್ಳಗ್ಗೆಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯನಾಗಿದ್ದೇನೆ. ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಬೆಳಗ್ಗೆಯಿಂದ ಟಿವಿ ನ್ಯೂಸ್ ಕಾರ್ಯಕ್ರಮಗಳನ್ನು ನೋಡಿಲ್ಲ. ಯಾವ ಸಿಡಿ, ಆಡಿಯೋ ಬಿಡುಗಡೆಯ ಬಗ್ಗೆಯೂ ನನಗೆ ಗೊತ್ತಿಲ್ಲ. ಅದನ್ನು ನೋಡಿದ ಮೇಲೆ ನಾನು ಮಾತನಾಡುತ್ತೇನೆ. ಸಿಡಿ, ಆಡಿಯೋ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ. ನನ್ನ ಕೆಲಸ ಅಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ಕುರಿತು ಪ್ರಶ್ನಿಸಿದಾಗ, ಈ ವಿಚಾರವಾಗಿ ಸರ್ಕಾರ ಉತ್ತರ ಕೊಡುತ್ತೆ, ನಾನಲ್ಲ ಎಂದು ಯಾವುದೇ ಪ್ರಶ್ನೆಗೆ ಉತ್ತರಿಸದೇ ಶೆಟ್ಟರ್ ತೆರಳಿದರು. ಇನ್ನು ರಾಷ್ಟ್ರೀಯ ಯುವಜನೋತ್ಸವದ ನಿಮಿತ್ತ ಕೆಲಗೇರಿ ಕೆರೆಯಲ್ಲಿ ಆಯೋಜಿಸಿದ್ದ ಜಲಕ್ರೀಡೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಚಾಲನೆ ನೀಡಿ ಒಂದು ಸುತ್ತು ಬೋಟಿಂಗ್ ಮಾಡಿದರು.
ಬಿಜೆಪಿ ಪಕ್ಷ ಹಾಗೂ ನಾಯಕರ ಬಗ್ಗೆ, ಆಪರೇಷನ್ ಕಮಲ ಬಗ್ಗೆ ಸಿ ಪಿ ಯೋಗೇಶ್ವರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ಆಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೆ ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ ಪಿ ಯೋಗೇಶ್ವರ, ಆ ಆಡಿಯೋ ನನ್ನದಲ್ಲ, ಅದು ಯಾವುದೋ ಫೇಕ್ ಆಡಿಯೋ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ನನಗೆ ವಿರೋಧಿಗಳು ಹೆಚ್ಚು ಅವರೇ ಇದನ್ನು ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನಾನು ಗೆಲ್ಲುತ್ತೇನೆ ಎನ್ನುವ ವಿಶ್ವಾಸ ನನಗಿದೆ, ಹಾಗಿರುವಾಗ ನಾನ್ಯಾಕೆ ಈ ಥರ ಮಾಡಲಿ ಎಂದು ಸ್ಪಷ್ಟನೆ ನೀಡಿದ್ದಾರೆ.