ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಮತಾಂತರ ವಿವಾದ ಮುನ್ನೆಲೆಗೆ ಬಂದಿದೆ. ಹಳೇ ಹುಬ್ಬಳ್ಳಿಯ ಶಿಕ್ಕಲಗಾರ ಸಮುದಾಯದ ಕುಟುಂಬಗಳನ್ನು ಗುರಿಯಾಗಿಸಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿಕ್ಕಲಗಾರ ಸಮುದಾಯ ಹಾಗೂ ಹಿಂದೂ ಮುಖಂಡರು ರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಿಕ್ಕಲಗಾರ ಸಮುದಾಯದ ಕುಟುಂಬವೊಂದರಲ್ಲಿ ಮತಾಂತರದ ವಿಚಾರವಾಗಿ ದಂಪತಿಯ ನಡುವೆ ಬಿರುಕು ಮೂಡಿತ್ತು. ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಪತಿಗೆ ಒತ್ತಡ ಹಾಕಿದ್ದು, ಮತಾಂತರ ಆಗದಿದ್ದರೆ ಸಂಸಾರ ಮಾಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇದರಿಂದ ಬೇಸತ್ತ ಪತಿ, ಈ ವಿಚಾರವನ್ನು ಸಮುದಾಯದ ಮುಖಂಡರ ಗಮನಕ್ಕೆ ತಂದಿದ್ದಾನೆ.
ಮತಾಂತರಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಸಹ ಹಲವು ಬಾರಿ ದಂಪತಿ ಠಾಣೆ ಮೆಟ್ಟಿಲೇರಿದ್ದು, ಪ್ರತಿ ಬಾರಿಯೂ ಪೊಲೀಸರು ರಾಜಿ ಮಾಡಿ ಕಳುಹಿಸಿದ್ದಾರೆ. ಅಷ್ಟೇ ಅಲ್ಲದೇ, ಮತಾಂತರ ಆಗುವಂತೆ ಶಿಕ್ಕಲಗಾರ ಸಮುದಾಯದ ಕೆಲವರು ಹಾಗೂ ಕೆಲ ಕ್ರಿಶ್ಚಿಯನ್ ಮುಖಂಡರು ನನ್ನ ಪತ್ನಿಯ ತಲೆ ಕೆಡಿಸಿದ್ದಾರೆಂದು ಆರೋಪಿಸಿ ಸಂಪತ್ ಬಗನಿ ಎಂಬಾತ ರೌಡಿ ಶೀಟರ್ ಮದನ್ ಬುಗುಡಿ ಸೇರಿದಂತೆ ಹದಿನೈದು ಜನರ ವಿರುದ್ಧ ಮತಾಂತರದ ದೂರು ದಾಖಲಿಸಿದ್ದಾರೆ.