ಕರ್ನಾಟಕ

karnataka

ETV Bharat / state

ಎರಡು ಕುಟುಂಬಗಳ ನಡುವೆ ಆಸ್ತಿ ವಿವಾದ.. ಒಂದು ಗುಂಪಿನಿಂದ 12 ಎಕರೆ ಬೆಳೆ ನಾಶ ಆರೋಪ - ಆಸ್ತಿ ವಿವಾದ

ಆಸ್ತಿ ವಿವಾದ ಹಿನ್ನೆಲೆ ಒಂದು ಕುಟುಂಬ ಇನ್ನೊಂದು ಕುಟುಂಬ ಬೆಳೆದ ಫಸಲನ್ನು ನಾಶಪಡಿಸಿರುವ ಘಟನೆ ಹುಬ್ಬಳ್ಳಿಯ ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದಲ್ಲಿ ನಡೆದಿದೆ.

property-dispute-between-two-families-dot-one-group-destroyed-12-acres-of-crops
ಎರಡು ಕುಟುಂಬಗಳ ನಡುವೆ ಆಸ್ತಿ ವಿವಾದ: ಒಂದು ಗುಂಪಿನಿಂದ 12 ಎಕರೆ ಬೆಳೆ ನಾಶ ಆರೋಪ

By ETV Bharat Karnataka Team

Published : Sep 2, 2023, 10:49 PM IST

ಎರಡು ಕುಟುಂಬಗಳ ನಡುವೆ ಆಸ್ತಿ ವಿವಾದ: ಒಂದು ಗುಂಪಿನಿಂದ 12 ಎಕರೆ ಬೆಳೆ ನಾಶ ಆರೋಪ

ಹುಬ್ಬಳ್ಳಿ: ಎರಡು ಕುಟುಂಬಗಳ ನಡುವಿನ ಆಸ್ತಿ ವಿವಾದದ ಹಿನ್ನೆಲೆ ಒಂದು ಗುಂಪಿನವರು ಇನ್ನೊಂದು ಗುಂಪಿನವರು ಬೆಳೆದ ಫಸಲನ್ನು ಟ್ರ್ಯಾಕ್ಟರ್ ಹರಿಸಿ ನಾಶಪಡಿಸಿರುವ ಘಟನೆ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತ ಕುಟುಂಬಸ್ಥರು ನಷ್ಟವನ್ನು ತುಂಬಿಕೊಡುವಂತೆ ದೂರು ದಾಖಲಿಸಿದ್ದಾರೆ.

ನಲವಡಿ ಗ್ರಾಮದ ಹೇಮಾವತಿ ದೊಡ್ಡಗೌಡ್ರ ಎಂಬುವವರು ಕಳೆದ 40 ವರ್ಷಗಳಿಂದ ತಮ್ಮ 12 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ಜಮೀನು ತಮಗೆ ಸೇರಿದ್ದು ಎಂದು ಶಂಕರಗೌಡ ಬೀಮನಗೌಡ ಪಾಟೀಲ ಎಂಬುವವರು ನವಲಗುಂದ ಜೆಎಂಎಫ್​ಸಿ ಕೋರ್ಟ್ ಹಾಗೂ ಧಾರವಾಡ ಹೈಕೋರ್ಟ್​ನಲ್ಲಿ ದಾವೆ ಹೂಡಿದ್ದರು. ಈ ಕುರಿತಂತೆ ಇದೇ ತಿಂಗಳ 5ನೇ ತಾರೀಕು ತೀರ್ಪು ನಿಗದಿಯಾಗಿತ್ತು.

ಆದರೆ ಶಂಕರಗೌಡ ತನ್ನ ಸಹಚರರೊಂದಿಗೆ ಆಗಮಿಸಿ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಶೇಂಗಾ, ಹತ್ತಿ, ಮೆಣಸಿನಕಾಯಿ, ಹೆಸರು ಬೆಳೆಗಳನ್ನು ಟ್ರ್ಯಾಕ್ಟರ್ ಹರಿಸಿ ‌ನಾಶಪಡಿಸಿದ್ದಾರೆ ಎಂದು ಹೇಮಾವತಿ ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಹೇಮಾವತಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಹೇಮಾವತಿ ಅವರು ಅಣ್ಣಿಗೇರಿ ಪೊಲೀಸ್​​ ಠಾಣೆಯಲ್ಲಿ ಗೌಡಪ್ಪಗೌಡ ದೊಡ್ಡಗೌಡ, ವೆಂಕರೆಡ್ಡಿ, ಶಂಕರಗೌಡ ಪಾಟೀಲ್ ಎಂಬವರ ಮೇಲೆ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಹೇಮಾವತಿ ಅವರು, ನಮ್ಮಲ್ಲಿ 12 ಎಕರೆ ಆಸ್ತಿ ಇದೆ. ಈ ಆಸ್ತಿಯು ನನ್ನ ಹೆಸರಲ್ಲಿದೆ. 2019ರಲ್ಲಿ ಈ ಸಂಬಂಧ ಹೈಕೋರ್ಟ್​ ತಡೆಯಾಜ್ಞೆ ನೀಡಿತ್ತು. ಈ ಜಮೀನಿನಲ್ಲಿ ಹೆಸರು, ಹತ್ತಿ, ಈರುಳ್ಳಿ ಮುಂತಾದವುಗಳನ್ನು ಬೆಳೆದಿದ್ದೆವು. ಶುಕ್ರವಾರ ಏಕಾಏಕಿ ಶಂಕರಗೌಡ ಮತ್ತು ಸಹಚರರು ಜಮೀನಿಗೆ ಬಂದು ನಮ್ಮ ಬೆಳೆಗಳನ್ನು ನಾಶಪಡಿಸಿದ್ದಾರೆ. 12 ಎಕರೆಯಲ್ಲಿ ಬೆಳೆದಿದ್ದ ಎಲ್ಲಾ ಬೆಳೆಗಳನ್ನು ನಾಶಪಡಿಸಿದ್ದು, 30ರಿಂದ 40 ಸಾವಿರ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಕಣ್ಣೀರು ಹಾಕಿದರು. ಈ ಸಂಬಂಧ ಸೂಕ್ತ ನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಹೇಮಾವತಿ ಮಗಳು ನಿವೇದಿತಾ ಮಾತನಾಡಿ, ಈ‌‌ ಜಮೀನಿನಲ್ಲಿ ಕಳೆದ ಕೆಲವು ದಶಕಗಳಿಂದ ನಾವು ಉಳುಮೆ ಮಾಡಿಕೊಂಡು ಬಂದಿದ್ದೇವೆ. ಆದರೆ ಈಗ ಪಾಟೀಲ್ ಕುಟುಂಬ ಜಮೀನು ಸಂಬಂಧ ತಗಾದೆ ತೆಗೆದಿದೆ. ಆಸ್ತಿ ವಿವಾದ ಕೋರ್ಟ್​ನಲ್ಲಿರುವುದರಿಂದ ಈ ಬಗ್ಗೆ 5ನೇ ತಾರೀಕು ತೀರ್ಪು ಬರಲಿದೆ. ತೀರ್ಪು ಅವರ ಪರ ಬಂದರೆ ಜಾಗ ಬಿಟ್ಟು ಕೊಡುತ್ತೇವೆ ಎಂದು ಹೇಳಿದ್ದೆವು. ಆದರೆ ತೀರ್ಪಿಗೆ ಮುನ್ನವೇ ನಾವು ಬೆಳೆದ ಬೆಳೆಯನ್ನು ನಾಶಪಡಿಸಿದ್ದಾರೆ. ಈ ನಷ್ಟವನ್ನು ತುಂಬಿಕೊಡಬೇಕು.‌ ಅದಲ್ಲದೇ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ :ರಾಜ್ಯದ ಹಲವೆಡೆ ಧಾರಾಕಾರ ಮಳೆ : ರೈತರು ಬೆಳೆದ ಹೀರೇಕಾಯಿ, ಹೂ, ಬಾಳೆ ತೋಟ ನಾಶ

ABOUT THE AUTHOR

...view details