ಹುಬ್ಬಳ್ಳಿ :ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು. ಇವಾಗ ಇರೋದು ಸಂವಿಧಾನದ ಸರ್ಕಾರ. ದೇಶ ನಡೆಯುತ್ತಿರುವುದು ಭಗವದ್ಗೀತೆ, ಕುರಾನ್, ಬೈಬಲ್ ಮೇಲೆ ಅಲ್ಲ, ಸಂವಿಧಾನದ ಮೇಲೆ. ಯಾರು ಏನಾದರೂ ಹೇಳಲಿ ಕರ್ನಾಟಕದಲ್ಲಿ ನಡಿತಿರೋದು ಸಂವಿಧಾನದ ಸರ್ಕಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸರ್ಕಾರಗಳು ನಡೆಯೋದು ಸಂವಿಧಾನ ಮೇಲೆ. ಬಸವ ಮತ್ತು ಅಂಬೇಡ್ಕರ್ ತತ್ವದ ಮೇಲೆ ಸರ್ಕಾರ ನಡೀತಿದೆ. ಹಿಂದಿನ ಸರ್ಕಾರ ಹಿಂದುತ್ವದ ಮೇಲೆ ನಡೆಯುತ್ತಿತ್ತು. ಪೀಠದ ಮೇಲೆ ಕುಳಿತು ಕಾಗೇರಿ ಅವರು ನಾನು ಆರ್.ಎಸ್.ಎಸ್ ನವರು ಎಂದಿದ್ರು. ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ" ಎಂದು ಆರೋಪಿಸಿದರು.
ಯತ್ನಾಳ್ ಆರೋಪಕ್ಕೆ ವಿಜಯೇಂದ್ರ ಉತ್ತರ ಕೊಡಬೇಕು. ವಿಜಯೇಂದ್ರ ಅವರು ಯತೀಂದ್ರ ಅವರನ್ನು ಸಿಎಂ ಸಿದ್ದರಾಮಯ್ಯ ಅವರ ನೆರಳು ಅಂತಾ ಆರೋಪ ಮಾಡಿದ್ರು. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಯಾರಿದ್ರು? ಎಂದ ಪ್ರಿಯಾಂಕ್ ಖರ್ಗೆ, ಯತ್ನಾಳ್ ದಾಖಲೆ ಬಿಡುಗಡೆ ಮಾಡ್ತೀವಿ ಅಂತಾರೆ. ಅವರ ಬಳಿ ನಾನು ಕರ್ನಾಟಕದ ಜನರ ಪರ ದಾಖಲೆ ಕೊಡಿ ಎಂದು ಮನವಿ ಮಾಡ್ತೀನಿ. ನೀವು ಪ್ರಾಮಾಣಿಕರು ಅಂತ ಗೊತ್ತಿದೆ. ಯಾವುದೇ ದಾಖಲೆ ಇದ್ದರೂ ಜಸ್ಟೀಸ್ ಮೈಕಲ್ ಕುನೋ ಅವರ ಸಮಿತಿಗೆ ಕೊಡಿ ಎಂದು ಹೇಳಿದರು.