ಧಾರವಾಡ:ರಾಜ್ಯದಲ್ಲಿ ಪರಿಸರ ಮತ್ತು ಉದ್ಯಮ ಸ್ನೇಹಿಯಾದ ನೂತನ ಗಣಿ ನೀತಿಯನ್ನು ರಾಜ್ಯ ಸರ್ಕಾರದಿಂದ ರೂಪಿಸುತ್ತಿದ್ದು, ನೀತಿಯ ಕರಡು ಪ್ರಗತಿ ಪರಿಶೀಲನಾ ಹಂತದಲ್ಲಿದೆ. ಅಂತಿಮಗೊಳಿಸಿ ಶೀಘ್ರದಲ್ಲಿ ಜಾರಿಗೊಳಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಹಾಗೂ ಸ್ಟೋನ್ ಕ್ರಷರ್ ಮತ್ತು ಕಲ್ಲು ಗಣಿಗಾರಿಕೆ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಮೈನಿಂಗ್ ನೀತಿಯಲ್ಲಿ ಲೈಸನ್ಸ್ ಸರಳೀಕರಣಕ್ಕೆ ಆದ್ಯತೆ ನೀಡಲಾಗಿದೆ ಮತ್ತು ಕ್ರಷರ್ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ಪಟ್ಟಾ ಭೂಮಿ ಹಾಗೂ ಸರ್ಕಾರಿ ಭೂಮಿಗಳಲ್ಲಿ ನಡೆಯುವ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ರಾಜಧನ (ರಾಯಲ್ಟಿ) ಮೊತ್ತವನ್ನು ಬೇರೆ ಬೇರೆಯಾಗಿ ನಿಗದಿಗೊಳಿಸಲಾಗುವುದು ಎಂದು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ‘ಏಕಗವಾಕ್ಷಿ ಯೋಜನೆ’ ಜಾರಿ ಮೂಲಕ ಉದ್ಯಮಿಗಳಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮ ವಹಿಸಲಾಗುತ್ತಿದೆ. ಸದ್ಯದಲ್ಲಿ ರಾಜ್ಯದ ಎಲ್ಲಾ ಕಂದಾಯ ವಿಭಾಗ ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಮೈನಿಂಗ್ ಅದಾಲತ್ ಆಯೋಜಿಸಲಾಗುತ್ತಿದೆ. ಅದಾಲತ್ ನಡೆಯುವ ಸ್ಥಳದಲ್ಲಿಯೇ ಗಣಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಾಗೂ ಸ್ಟೋನ್ ಕ್ರಷರ್, ಕಲ್ಲು ಗಣಿಗಾರಿಕೆ ನಡೆಸುವ ಉದ್ಯಮಗಳಿಗೆ ಸೂಕ್ತ ತರಬೇತಿ ನೀಡಲು ಸ್ಕೂಲ್ ಆಫ್ ಮೈನಿಂಗ್ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಚಿವ ಮುರಗೇಶ ನಿರಾಣಿ ಹೇಳಿದರು.