ಹುಬ್ಬಳ್ಳಿ :ಪಂಚಮಸಾಲಿ ಸಮುದಾಯದ ಮೀಸಲಾತಿಗೆ ರಾಜಕೀಯ ಮುಖಂಡರೊಬ್ಬರು ಅಡ್ಡಿಪಡಿಸುತ್ತಿದ್ದು, ಅವರ ಹೆಸರನ್ನು ಶೀಘ್ರ ಬಹಿರಂಗ ಪಡಿಸುವುದಾಗಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಪಂಚಮಸಾಲಿ ಸಮಾಜದ ಟ್ರಸ್ಟ್ ನ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ನಗರದಲ್ಲಿಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಗೆ ಸಂಬಂಧಪಟ್ಟಂತೆ ನಾಲ್ಕು ಬಾರಿ ಕೊಟ್ಟ ಮಾತಿಗೆ ಸರ್ಕಾರ ತಪ್ಪಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಮುಖಂಡರೊಬ್ಬರು ಒತ್ತಡ ಹೇರುತ್ತಿದ್ದಾರೆ. ಅವರ ಹೆಸರನ್ನು ಶಿಗ್ಗಾಂವಿ ಹೋರಾಟದಲ್ಲಿ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.
ಇನ್ನು ಸರ್ಕಾರದ ಗಡುವಿಗೆ ನಾವು ಒಪ್ಪುವುದಿಲ್ಲ: ಸರ್ಕಾರ ಮತ್ತೆ ಗಡುವು ಕೇಳಿದರೆ ನಾವು ಒಪ್ಪುವುದಿಲ್ಲ. ಹಿಂದೂಳಿದ ವರ್ಗಗಳ ಆಯೋಗದ ವರದಿಯನ್ನು ಪಡೆದಿಲ್ಲ. ಸರ್ವೇ ಕೂಡಾ ನಡೆಸುತ್ತಿಲ್ಲ. ಸರ್ಕಾರದ ಈ ನಡೆಗೆ ಪಂಚಮಸಾಲಿ ಸಮುದಾಯ ಬೇಸತ್ತಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಅಕ್ಟೋಬರ್, ಇಲ್ಲವೇ ನವೆಂಬರ್ ತಿಂಗಳಲ್ಲಿ 25 ಲಕ್ಷ ಜನರೊಂದಿಗೆ ವಿಧಾನಸಭೆಗೆ ಮುತ್ತಿಗೆ ಹಾಕಿ ಮಾಡು ಇಲ್ಲವೇ ಮಡಿ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಮುದಾಯದ ನಾಯಕರೊಬ್ಬರಿಂದ ಅಡ್ಡಿ: ಕೂಡಲ ಸಂಗಮ ಶ್ರೀ ಇದು ಪಕ್ಷಾತೀತ ಹೋರಾಟ ಆಗಿದ್ದು, ಬಿಜೆಪಿಯ ಶಾಸಕರು, ಸಚಿವರು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಚರ್ಚೆಗೆ ಸಮುದಾಯದ ಹದಿನೈದು ಶಾಸಕರು ಸಭಾಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಏನಾಗುತ್ತದೆ ಎಂದು ಕಾದುನೋಡಬೇಕಿದೆ. ಇನ್ನೂ ಹೋರಾಟಗಾರರ ಮೇಲೆ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಕಾಶಪ್ಪನವರ್ ಯಾವ ಇಡಿ, ಐಟಿ ಬಂದರೂ ನಾವು ಹೆದರುವುದಿಲ್ಲ ಎಂದು ಹೇಳಿದರು.
ನಾಳೆ ಶಿಗ್ಗಾಂವಿ ಸಿಎಂ ಮನೆ ಮುಂದೆ ಧರಣಿ : ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗಾಗಿ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಸಮಾಜದ ಹೋರಾಟದ ಗಡುವಿಗೆ ಸರ್ಕಾರ ಮಾತು ತಪ್ಪಿದೆ. ಈ ಹಿನ್ನೆಲೆಯಲ್ಲಿ ಮೀಸಲಾತಿಗಾಗಿ ಆಗ್ರಹಿಸಿ ನಾಳೆ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿರುವ ಮನೆ ಮುಂದೆ ಒಂದು ದಿನದ ಬೃಹತ್ ಧರಣಿ ಸತ್ಯಾಗ್ರಹ ಮಾಡಲಾಗುವುದು.
ನಾಳೆ ಶಿಗ್ಗಾಂವಿಯ ಚೆನ್ನಮ್ಮನ ವೃತ್ತದಿಂದ ರ್ಯಾಲಿ ಮೂಲಕ ಒಂದು ಲಕ್ಷ ಪಂಚಮಸಾಲಿಗರೊಂದಿಗೆ ಮುಖ್ಯಮಂತ್ರಿಗಳ ಮನೆ ಮುಂದೆ ಸತ್ಯಾಗ್ರಹ ನಡೆಸುವುದಾಗಿ ಇದೇ ವೇಳೆ ಹೇಳಿದರು.
ಇದನ್ನೂ ಓದಿ :ಪಂಚಮಸಾಲಿ ಮೀಸಲಾತಿ ವಿಳಂಬ ನೀತಿ : ಸಿಎಂ ನಿವಾಸದ ಮುಂದೆ ಸತ್ಯಾಗ್ರಹದ ಎಚ್ಚರಿಕೆ