ಹುಬ್ಬಳ್ಳಿ:ಕಡಿಮೆ ರಕ್ತದ ಒತ್ತಡ ಹಾಗೂ ಉಸಿರಾಟದ ತೊಂದರೆಯಿಂದ ಮೂರು ದಿನಗಳ ಹಿಂದೆ ವೃದ್ಧೆಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಯ ಬಿಲ್ ಕಟ್ಟಿದ ನಂತರ ವೃದ್ಧೆ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿರುವುದನ್ನು ಖಂಡಿಸಿ ವೃದ್ಧೆಯ ಸಂಬಂಧಿಕರು ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೋವಿಡ್ ಹೆಸರಲ್ಲಿ ಹಣ ವಸೂಲಿ ದಂಧೆ ಆರೋಪ: ಪ್ರತಿಭಟನೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ವೃದ್ಧೆಯ ಸಂಬಂಧಿಕರು ಪ್ರತಿಭಟನೆ ನಡೆಸಿ ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಸುಚಿರಾಯ ಆಸ್ಪತ್ರೆಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತಳ ಸಂಬಂಧಿಕರಿಂದ 1.20 ಲಕ್ಷ ರೂಪಾಯಿ ಬಿಲ್ ಕಟ್ಟಿಸಿಕೊಂಡ ನಂತರ ವೃದ್ದೆ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಕೊರೊನಾ ಇದ್ದಿದ್ದೇ ಆದರೆ ಬಿಲ್ ಕಟ್ಟುವ ಮೊದಲು ಈ ವಿಚಾರ ಯಾಕೆ ತಿಳಿಸಲಿಲ್ಲ. ಹಣದಾಸೆಗಾಗಿ ಆಸ್ಪತ್ರೆಯವರು ಕೊರೊನಾ ಇದೆ ಎಂದು ಹೆಚ್ಚಿನ ಬಿಲ್ ಕಟ್ಟಿಸಿಕೊಂಡು ಹಣ ವಸೂಲಿ ದಂಧೆ ನಡೆಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯರ ವಿರುದ್ಧ ಕಿಡಿಕಾರಿದರು.
ಇನ್ನು, ಪ್ರತಿಭಟನಾಕಾರರ ಮನವೊಲಿಸಲು ಬಂದ ಪೊಲೀಸರ ಜೊತೆ ಕೆಲಕಾಲ ಸಂಬಂಧಿಕರ ವಾಗ್ವಾದ ನಡೆಯಿತು. ಕೊರೊನಾ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.