ಕರ್ನಾಟಕ

karnataka

ETV Bharat / state

ಬಿಜೆಪಿಯ ಜನವಿರೋಧಿ ಆಡಳಿತದಿಂದ ಬೇಸತ್ತು "ಕೈ" ಹಿಡಿದಿದ್ದೇನೆ: ಮೋಹನ್ ಲಿಂಬಿಕಾಯಿ

ಎಂಎಲ್​ಸಿ ಟಿಕೆಟ್​ ಕೊಡುವುದಾಗಿ ಹೇಳಿ, ಟಿಕೆಟ್​ ನೀಡಿಲ್ಲ - ಇದರಿಂದ ನನ್ನ ಮನಸ್ಸಿಗೆ ಬೇಜಾರಾಗಿ ಕಾಂಗ್ರೆಸ್ ಸೇರಿದ್ದೀನಿ - ಮೋಹನ್ ಲಿಂಬಿಕಾಯಿ

Mohan Limbikai joins congress party
ಬಿಜೆಪಿಯ ಜನವಿರೋಧಿ ಆಡಳಿತದಿಂದ ಬೇಸತ್ತು "ಕೈ" ಹಿಡಿದಿದ್ದೇನೆ: ಮೋಹನ್ ಲಿಂಬಿಕಾಯಿ

By

Published : Mar 18, 2023, 4:25 PM IST

Updated : Mar 18, 2023, 4:55 PM IST

ಬಿಜೆಪಿಯ ಜನವಿರೋಧಿ ಆಡಳಿತದಿಂದ ಬೇಸತ್ತು "ಕೈ" ಹಿಡಿದಿದ್ದೇನೆ: ಮೋಹನ್ ಲಿಂಬಿಕಾಯಿ

ಹುಬ್ಬಳ್ಳಿ:ನಾನು ಯಾವುದೇ ಕರಾರು ಇಲ್ಲದೆ ಕಾಂಗ್ರೆಸ್ ಸೇರಿದ್ದೇನೆ. ರಾಜ್ಯದಲ್ಲಿ ಮೂರು ವರ್ಷದಿಂದ ಜನ ವಿರೋಧಿ ಸರ್ಕಾರ ಇದೆ. ನನಗೆ ಬಹಳ ನೋವಾಗಿದೆ. ಹೀಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎಂದು ಮೋಹನ್ ಲಿಂಬಿಕಾಯಿ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2008 ರಲ್ಲಿ ನಾನು ಪದವೀಧರ ಕ್ಷೇತ್ರದಿಂದ ಗೆದ್ದಿದ್ದೆ. ಭಾರತೀಯ ಜನತಾ ಪಾರ್ಟಿ ಮುಖಂಡರು ಎಲ್ಲರೂ ಸೇರಿ ನನ್ನ ಚುನಾವಣೆಗೆ ನಿಲ್ಲಿಸಿದ್ದರು ಎಂದರು.

2013 ರಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಯಾರೂ ಅವರ ಜೊತೆ ಹೋಗಲಿಲ್ಲ. ಕೆಲ ಮಂತ್ರಿಗಳು ಅವರಿಗೆ ಕೆಜೆಪಿ ಪಕ್ಷ ಕಟ್ಟಲು ಉತ್ತೇಜನ ನೀಡಿದರು. ಆದರೆ ಅವರ ಜೊತೆ ಯಾರೂ ಹೋಗಲಿಲ್ಲ. ನಾನು ನನ್ನ ಅಧಿಕಾರ ಅವಧಿ ಒಂದೂವರೆ ವರ್ಷ ಇದ್ದರೂ, ನಾನು ಯಡಿಯೂರಪ್ಪ ಜೊತೆ ಹೋದೆ ಎಂದರು. 2014 ರಲ್ಲಿ ನನಗೆ ಟಿಕೆಟ್ ಕೊಡಲಿಲ್ಲ. 2020 ರಲ್ಲೂ ಕೊಡಲಿಲ್ಲ. 2022 ರಲ್ಲಿ ನೀವೇ ಅಭ್ಯರ್ಥಿ ಎಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿಮಗೆ ಎಂಎಲ್​ಸಿ ಟಿಕೆಟ್ ಎಂದಿದ್ದರು. ಚುನಾವಣೆ ಬರುತ್ತಲೇ ಬಸವರಾಜ ಹೊರಟ್ಟಿಗೆ ಟಿಕೆಟ್ ಕೊಟ್ಟರು. ಇದರಿಂದ ನನ್ನ ಮನಸ್ಸಿಗೆ ಬೇಜಾರಾಗಿದೆ‌. ಹೀಗಾಗಿ ಕಾಂಗ್ರೆಸ್ ಸೇರಿದ್ದೀನಿ ಎಂದು ಲಿಂಬಿಕಾಯಿ ಹೇಳಿದರು.

ಇನ್ನು ಕಾಂಗ್ರೆಸ್ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಇದು ಏಕಾಂಗಿ ನಿರ್ಧಾರ, ಯಡಿಯೂರಪ್ಪ ಬಿಜೆಪಿಯಲ್ಲಿದ್ದಾರೆ. ನಾನು ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಸೇರುವುದನ್ನು ಹೇಳಿಲ್ಲ. ಹೇಳಬೇಕು ಎನ್ನುವ ಪ್ರಮೇಯ ಬಂದಿಲ್ಲ. ನಾನು ಕಾಂಗ್ರೆಸ್ ಸೇರಿದ ಮೇಲೆ ಯಾರೂ ಸಂಪರ್ಕ ಮಾಡಿಲ್ಲ ಎಂದು ತಿಳಿಸಿದರು.

ರೌಡಿಗಳಿಗೆ ಕ್ಲೀನ್ ಚಿಟ್ ಕೊಟ್ಟು ಬಿಜೆಪಿ ದೇಶವನ್ನು ಹಾಳು ಮಾಡುತ್ತಿದೆ- ಸಲೀಂ ಅಹ್ಮದ್​:ಡಬಲ್ ಇಂಜಿನ್ ಬಿಜೆಪಿ ಸರ್ಕಾರ ರೌಡಿಗಳನ್ನು ಪೋಷಿಸುವ ಹಾಗೂ ದೇಶವನ್ನು ಗೂಂಡಾ ರಾಜ್ಯವನ್ನಾಗಿ ಮಾಡುವ ಸರ್ಕಾರ. ಕ್ರಿಮಿನಲ್ ಗಳನ್ನು ಪ್ರಧಾನಮಂತ್ರಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಕೈ ಮುಗಿಯುವಂತೆ ಮಾಡಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್​ ವಾಗ್ದಾಳಿ ನಡೆಸಿದರು.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸುಮಾರು 23 ಸಾವಿರ ರೌಡಿಗಳಿಗೆ ಕ್ಲೀನ್ ಚಿಟ್ ಕೊಡುವ ಮ‌ೂಲಕ ದೇಶವನ್ನು ಹಾಳು ಮಾಡಲು ಹೊರಟಿದ್ದಾರೆ. ಫೈಟರ್ ರವಿ ಎಂಬ ರೌಡಿಯನ್ನು ಪ್ರಧಾನಮಂತ್ರಿಯವರ ಸ್ವಾಗತಕ್ಕೆ ನಿಲ್ಲಿಸುತ್ತಾರೆ. ಪ್ರಧಾನಮಂತ್ರಿ ಅವರು ಇಂತಹ ಕ್ರಿಮಿನಲ್ ಗಳಿಗೆ ಕೈ ಮುಗಿಯುತ್ತಾರೆ ಎಂದರೇ ಏನು ಅರ್ಥ? ಇದು ರೌಡಿಗಳ ಸರ್ಕಾರ ಎಂದು ತೋರಿಸುವ ಮೂಲಕ ತಮ್ಮ ವ್ಯಕ್ತಿತ್ವವನ್ನು ಬಿಜೆಪಿ ಪ್ರಸ್ತುತ ಪಡಿಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬದಲಿಗೆ ಜನರ ಕ್ಷಮೆ ಕೇಳುವ ಯಾತ್ರೆ ಮಾಡಬೇಕಿತ್ತು. ಈಗಾಗಲೇ ಜನರಿಗೆ ಮೋಸ ಮಾಡಿದೆ. 40% ಕಮೀಷನ್, ಭ್ರಷ್ಟಾಚಾರ, ಬೆಲೆ ಏರಿಕೆ, ಸುಳ್ಳು ಭರವಸೆ ನೀಡಿ ಜನರನ್ನು ಮೋಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಜನರನ್ನು ಕ್ಷಮೆ ಕೇಳುವ ಯಾತ್ರೆ ಮಾಡಬೇಕಿತ್ತು ಎಂದರು. ಇನ್ನು ಒಬ್ಬ ಎಂಎಲ್ಎ ಮನೆಯಲ್ಲಿ ಎಂಟು ಕೋಟಿ ಹಣ ಪತ್ತೆಯಾಗಿದೆ. ಒಬ್ಬ ಎಂಎಲ್ಎ ಯನ್ನು ಅರೆಸ್ಟ್ ಮಾಡಲು ಶಕ್ತಿ ಇಲ್ಲದಂತ ಏಕೈಕ ಬದ್ಧತೆ ಇಲ್ಲದೇ ಇರುವ ಸರ್ಕಾರ ಬಿಜೆಪಿ ಸರ್ಕಾರವಾಗಿದೆ. ಬಿಜೆಪಿಯವರಿಗೆ ಜನರ ಬಳಿಯಲ್ಲಿ ಮತ ಕೇಳುವ ನೈತಿಕತೆಯೇ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬೆಳಗಾವಿಯಲ್ಲಿ ಯುವಕ್ರಾಂತಿ ಕಾರ್ಯಕ್ರಮ : ರಾಹುಲ್​ ಗಾಂಧಿ ಆಗಮನ.. ಅಭ್ಯರ್ಥಿಗಳ ಪಟ್ಟಿ​ ಬಿಡುಗಡೆ- ಡಿಕೆಶಿ

Last Updated : Mar 18, 2023, 4:55 PM IST

ABOUT THE AUTHOR

...view details