ಧಾರವಾಡ:ಒಂದು ದೇವಾಲಯದಿಂದ ಮತ್ತೊಂದು ದೇವಾಲಯಕ್ಕೆ ಹಣ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ವಿವಿಧ ಕಾರ್ಯಕ್ರಮಗಳಿಗಾಗಿ ಧಾರವಾಡಕ್ಕೆ ಆಗಮಿಸಿದ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಮುಜರಾಯಿ ಇಲಾಖೆಗೆ ಆದಾಯದ ಪ್ರಶ್ನೆ ಬರುವುದಿಲ್ಲ. ನಮ್ಮಲ್ಲಿ 34 ಸಾವಿರ ದೇವಾಲಯಗಳಿದ್ದು ಆ ದೇವಾಲಯಗಳ ಹುಂಡಿಗೆ ಬರುವ ಹಣವೆಲ್ಲವೂ ಆ ದೇವಸ್ಥಾನಕ್ಕೇ ಸೇರುತ್ತದೆ. ಒಂದು ದೇವಾಲಯದಿಂದ ಮತ್ತೊಂದು ದೇವಾಲಯಕ್ಕೆ ಹಣ ವರ್ಗಾಯಿಸಲು ಸಾಧ್ಯವಿಲ್ಲ. ಕೆಲವೊಂದು ದೇವಾಲಯಗಳ ಹುಂಡಿಗೆ ಹೆಚ್ಚಿನ ಹಣ ಬಂದಿರುತ್ತದೆ. ಅದು ಆ ದೇವಾಲಯದ ಅಭಿವೃದ್ಧಿಗೆ ಸೀಮಿತ. ಆ ಹಣವನ್ನು ಬೇರೆ ದೇವಾಲಯಕ್ಕೆ ಕೊಡುವ ಹಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹೊಸ ಬಸ್ ಖರೀದಿ:ಶಕ್ತಿ ಯೋಜನೆಯಿಂದ ದಟ್ಟಣೆ ಹೆಚ್ಚಾಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, 4 ವರ್ಷದಿಂದ ಹೊಸ ಬಸ್ ಖರೀದಿ ಆಗಿರಲಿಲ್ಲ. ಸಿಬ್ಬಂದಿ ನೇಮಕವೂ ಆಗಿರಲಿಲ್ಲ. ಪ್ರತಿದಿನ ರಾಜ್ಯದಲ್ಲಿ 80 ಲಕ್ಷ ಜನ ಓಡಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶಕ್ತಿ ಯೋಜನೆ ಆರಂಭವಾಗಿದೆ. ಈಗ ನಿತ್ಯ ಓಡಾಡುವವರ ಸಂಖ್ಯೆ 1 ಕೋಟಿ ಮೇಲಾಗಿದೆ. ಹೀಗಾಗಿ ಶಾಲಾ ಮಕ್ಕಳಿಗೆ ತೊಂದರೆ ಆಗಿದೆ. ಹಾಗಾಗಿ ಹೊಸ ಬಸ್‌ಗಳು ಬರಲಿವೆ. ಆಗ ಸಮಸ್ಯೆ ಪರಿಹಾರ ಆಗುತ್ತದೆ ಎಂದರು.