ಧಾರವಾಡ/ಬೆಂಗಳೂರು:ಯೋಜನೆ ಮತ್ತು ಸಾಂಖಿಕ ಖಾತೆ ಸಚಿವ ಡಿ.ಸುಧಾಕರ್ ವಿರುದ್ಧ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸೆವನ್ ಹಿಲ್ಸ್ ಡೆವಲ್ಪರ್ಸ್ ಆ್ಯಂಡ್ ಟ್ರೇಡರ್ಸ್‌ನ ನಿರ್ದೇಶಕರೂ ಆಗಿರುವ ಡಿ.ಸುದಾಕರ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಆದೇಶ ನೀಡಿತು. ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ತುರ್ತು ನೊಟೀಸ್ ಜಾರಿ ಮಾಡಿ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:"ಡಿ.ಸುಧಾಕರ್, ಜಿ.ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬವರು ನಮ್ಮ ಕುಟುಂಬದವರಿಗೆ ಮೋಸ ಮಾಡಿ ಜಮೀನಿನ ಕ್ರಯಪತ್ರ ಮಾಡಿಕೊಂಡಿದ್ದಾರೆ. ಈ ಕುರಿತು ನಗರದ ಸಿವಿಲ್ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದೆ. ಹೀಗಿದ್ದರೂ, ಡಿ.ಸುಧಾಕರ್ ಸೇರಿದಂತೆ ಮತ್ತಿತರರು ಬಂದು ತಾವು ನೆಲೆಸಿರುವ ಮನೆಗಳನ್ನು ತೆರವುಗೊಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿ ಪ್ರಶ್ನಿಸಿದಾಗ ಸುಮಾರು 35ಕ್ಕೂ ಹೆಚ್ಚು ಮಂದಿ ತಮ್ಮ ವಿರುದ್ಧ ದೌರ್ಜನ್ಯ ನಡೆಸಿದರು. ಮಗಳ ಮೇಲೆ ಹಲ್ಲೆ ನಡೆಸಿ ನಮ್ಮ ಜಾತಿ ಉಲ್ಲೇಖಿಸಿ ನಿಂದನೆ ಮಾಡಿದರು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಯಲಹಂಕ ನಿವಾಸಿ ಸುಬ್ಬಮ್ಮ ಸೆಪ್ಟೆಂಬರ್ 10ರಂದು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪಂಗಡದ (ದೌರ್ಜನ್ಯ ತಡೆ) ಕಾಯಿದೆ, ಐಪಿಸಿಯ ವಿವಿಧ ಸೆಕ್ಷನ್‌ಗಳು ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು. ಇದನ್ನು ಪ್ರಶ್ನಿಸಿ ಡಿ.ಸುಧಾಕರ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.