2ಎ ಮೀಸಲಾತಿಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯದಿಂದ ಹೋರಾಟ ಹುಬ್ಬಳ್ಳಿ :ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಕೂಡಲ ಸಂಗಮ ಪಂಚಾಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಇಂದು ಪಾದಯಾತ್ರೆ ಮೂಲಕ ಗಬ್ಬೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದರು.
ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶುರುವಾದ ಪ್ರತಿಭಟನೆಗೆ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಶಾಸಕ ಎಂ.ಆರ್.ಪಾಟೀಲ ಚಾಲನೆ ನೀಡಿದರು. ನಂತರ ಪಾದಯಾತ್ರೆ ಮೂಲಕ ಬಂಕಾಪುರ ಚೌಕದಿಂದ ಗಬ್ಬೂರು ವೃತ್ತದ ಕಡೆಗೆ ಬಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. 'ಪಂಚಮಸಾಲಿ ಗುಡುಗಿದರೆ ವಿಧಾನಸೌಧ ನಡುಗುವುದು' ಎಂದು ಘೋಷಣೆ ಕೂಗಿದರು.
ಬಳಿಕ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಈ ದೇಶದ ಇತಿಹಾಸದಲ್ಲಿ ಲಿಂಗವನ್ನು ಬೀದಿಗೆ ತಂದು ಯಾರೂ ಪ್ರತಿಭಟನೆ ಮಾಡಿಲ್ಲ. ಅಂದು ಬಾಲಗಂಗಾಧರನಾಥ ತಿಲಕರು ಸಾರ್ವಜನಿಕ ಗಣೇಶೋತ್ಸವ ಶುರುಮಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಒಂದುಗೂಡಿಸಿದ್ದರು. ಇದೀಗ ಹೋರಾಟದ 2 ಹಂತವನ್ನು ಲಿಂಗಾಯತ ಪಂಚಾಮಸಾಲಿಗಳು ಮೀಸಲಾತಿಗಾಗಿ ರಸ್ತೆ ಬಂದ್ ಮಾಡಿ ಲಿಂಗ ಪೂಜೆ ಮಾಡಿದ್ದೇವೆ. ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದರೂ ಯಾವ ಸರ್ಕಾರ ಕೂಡ ನಮ್ಮ ಹೋರಾಟದ ಕಡೆ ಗಮನಹರಿಸುತ್ತಿಲ್ಲ. ಹೀಗಾಗಿ ನೂತನ ಸರ್ಕಾರಕ್ಕೆ ಆರಂಭದಲ್ಲೇ ಬಿಸಿ ಮುಟ್ಟಿಸುವ ಕೆಲಸ ಮಾಡಲು ಕೈಯಲ್ಲಿ ಲಿಂಗ ಹಿಡಿದಿದ್ದೇವೆ. ಈ ಮೂಲಕ ಭಗವಂತನ ಮೊರೆ ಹೋಗಿದ್ದೇವೆ" ಎಂದು ಹೇಳಿದರು.
"ಈಗಿನ ಸರ್ಕಾರದಲ್ಲಿ 136 ಜನ ಶಾಸಕರಿದ್ದಾರೆ. 11 ಜನ ಪಂಚಮಸಾಲಿಗಳು ನಮ್ಮ ಬಳಿ ಇದ್ದಾರೆ ಎನ್ನುವ ಭ್ರಮೆಯಿಂದ ಹೊರ ಬರಬೇಕು. ಸಚಿವ ಸ್ಥಾನ ಕೊಟ್ಟರೆ ನಮ್ಮ ಸಮುದಾಯ ಸಮಾಧಾನ ಆಗುವುದಿಲ್ಲ. ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಟ್ಟಾಗ ಮಾತ್ರ ತೋಷ ಆಗುತ್ತದೆ.
ಮೀಸಲಾತಿ ನೀಡಲು ಕಾನೂನು ಅಡೆತಡೆಗಳಿದ್ದರೆ ಅದನ್ನು ಚರ್ಚೆ ಮಾಡಲಿ. ನಿಮ್ಮ ಸರ್ಕಾರದಲ್ಲಿ ಈಗಾಗಲೇ ಅನೇಕ ಸಮುದಾಯಗಳಿಗೆ ಮೀಸಲಾತಿ ನೀಡಿದ್ದೀರಿ. ನಮ್ಮ ಸಮುದಾಯಕ್ಕೂ ಲೋಕಸಭಾ ಚುನಾವಣೆಯೊಳಗಡೆ ಮೀಸಲಾತಿ ಕೊಡಬೇಕು. ಇಲ್ಲವಾದರೆ ಬೆಳಗಾವಿಯ ಸುವರ್ಣ ಸೌಧದೆದುರು ಇಷ್ಟಲಿಂಗ ಪೂಜೆ ಮಾಡುತ್ತೇವೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ" ಎಂದು ಎಚ್ಚರಿಕೆ ನೀಡಿದರು.
"ಬಿಜೆಪಿ ಸರ್ಕಾರವಿದ್ದಾಗ ಪಂಚಮಸಾಲಿಗಳಿಗೆ 2ಡಿ ಮೀಸಲಾತಿ ಕೊಡಲಾಗಿತ್ತು. ಆದರೆ, ನಮ್ಮ ಬೇಡಿಕೆ ಇರುವುದು 2ಎ ಮೀಸಲಾತಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದುವರೆಗೂ ಯಾವುದೇ ಸಭೆ ಕರೆದಿಲ್ಲ. ಸರ್ಕಾರದ ಮೇಲೆ ಒತ್ತಡ ಹೇರಲು ಹೋರಾಟ ನಡೆಸುತ್ತಿದ್ದೇವೆ. ಮುಂದಿನ ಹೋರಾಟ ಯಾವ ರೀತಿ ಇರಲಿದೆ ಅನ್ನೋದನ್ನು ಇಂದು ನಿರ್ಧರಿಸುತ್ತೇವೆ. ಮೀಸಲಾತಿ ವಿಚಾರವಾಗಿ ಪದೇ ಪದೇ ಗಡುವು ಕೊಡುತ್ತಿಲ್ಲ. 30 ಜಿಲ್ಲೆಗಳ ಹೋರಾಟದ ನಂತರ ಅಂತಿಮ ಹೋರಾಟ ನಡೆಯಲಿದೆ" ಎಂದರು.
ಇದನ್ನೂ ಓದಿ :2ಎ ಮೀಸಲಾತಿ ಹೋರಾಟ: ಅ.13 ರಂದು ಗಬ್ಬೂರು ಬೈಪಾಸ್ನಲ್ಲಿ ಇಷ್ಟಲಿಂಗ ಮಹಾಪೂಜೆ: ಬಸವಜಯ ಮೃತ್ಯಂಜಯ ಶ್ರೀ