ಹುಬ್ಬಳ್ಳಿ:ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರ ಕೆ ಎಲ್ ರಾಹುಲ್ ಬಡ ವಿದ್ಯಾರ್ಥಿಯೊಬ್ಬನಿಗೆ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಮಾಡಿ ಮೂಲಕ ಮಾನವೀಯತೆ ಮೆರೆದಿದ್ದಾರೆ. ಮಹಲಿಂಗಪುರದ ಅಮೃತ ಮಾವಿನಕಟ್ಟಿ ಎಂಬ ವಿದ್ಯಾರ್ಥಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಮರ್ಸ್ ವಿಭಾಗದಲ್ಲಿ 600ಕ್ಕೆ 571 ಅಂಕಗಳನ್ನು ಪಡೆದು ಉತ್ತೀರ್ಣನಾಗಿದ್ದಾರೆ. ಬಡ ಕುಟುಂಬದಿಂದ ಬಂದಿರುವ ಈತ ಹೆಚ್ಚಿನ ವಿದ್ಯಾಭ್ಯಾಸ ನಡೆಸಲು ಆಸಕ್ತಿ ಹೊಂದಿದ್ದ. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿ ಇರದ ಕಾರಣ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ಆರ್ಥಿಕ ಸಹಾಯಕ್ಕಾಗಿ ಮೊರೆಯಿಟ್ಟಿದ್ದರು.
ಇದನ್ನು ತಿಳಿದ ನಿತೀನ್ ಎಂಬುವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಈ ವಿದ್ಯಾರ್ಥಿಯನ್ನು ಹುಬ್ಬಳ್ಳಿಯ ಕಾಲೇಜುವೊಂದಕ್ಕೆ ಕರೆದೊಯ್ಯುತ್ತಾರೆ. ಬಿಕಾಂ ಜತೆಗೆ ಸಿಎ ಕೋಚಿಂಗ್ ಅಡ್ಮಿಷನ್ಗಾಗಿ ಕೇಳುತ್ತಾರೆ. ಇದಕ್ಕೆ ವಾರ್ಷಿಕ 85ಸಾವಿರ ರೂ. ಆಗಲಿದೆ ಎಂದು ಕಾಲೇಜು ಆಡಳಿತ ಮಂಡಳಿಯವರು ಹೇಳುತ್ತಾರೆ. ವಿದ್ಯಾರ್ಥಿ ಒಳ್ಳೆಯ ಮಾರ್ಕ್ಸ್ ಪಡೆದ ಕಾರಣ 10ಸಾವಿರ ರಿಯಾಯಿತಿ ನೀಡಿ 75ಸಾವಿರ ತುಂಬಲು ಹೇಳುತ್ತಾರೆ. ಬಳಿಕ ನಿತೀನ್ ಅವರು ಮಂಜುನಾಥ್ ಹೆಬಸೂರು ಎಂಬುವವರಿಗೆ ಕೆರೆ ಮಾಡಿ ವಿಷಯ ತಿಳಿಸುತ್ತಾರೆ. ಮಂಜುನಾಥ್ ಅವರು ಈ ವಿಷಯವನ್ನು ತಮ್ಮ ಇಂಜಿನಿಯರ್ ಸ್ನೇಹಿತ ಅಕ್ಷಯ ಎಂಬುವವರಿಗೆ ತಿಳಿಸುತ್ತಾರೆ. ಅಕ್ಷಯ್ ಕೂಡಲೇ ಕ್ರಿಕೆಟರ್ ಕೆಎಲ್ ರಾಹುಲ್ ಅವರನ್ನು ಸಂಪರ್ಕಿಸಿ ವಿಷಯ ತಿಳಿಸುತ್ತಾರೆ. ಇದನ್ನರಿತ ರಾಹುಲ್ ಪ್ರತಿಭಾವಂತ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಉಂಟಾಗಬಾರದೆಂದು ಆರ್ಥಿಕ ಸಹಾಯಕ್ಕೆ ಮುಂದಾಗಿದ್ದಾರೆ. ವಿದ್ಯಾರ್ಥಿಯ ಕಾಲೇಜಿನ ಎಲ್ಲ ಶುಲ್ಕವನ್ನು ಭರಿಸುವುದಾಗಿ ಹೇಳಿ ಬ್ಯಾಂಕ್ ಅಕೌಂಟ್ ಡಿಟೇಲ್ಸ ತೆಗೆದುಕೊಂಡಿದ್ದಾರಂತೆ.