ಧಾರವಾಡ/ಬೆಳಗಾವಿ:''ಕರ್ನಾಟಕದ ಚುನಾವಣೆ ಇಡೀ ದೇಶದ ರಾಜಕೀಯಕ್ಕೆ ದಿಕ್ಸೂಚಿಯಾಗಿದೆ. ಬದಲಾವಣೆಯ ದಿಕ್ಸೂಚಿ ಕರ್ನಾಟಕದಿಂದ ಆಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಇಲ್ಲಿಗೆ ನಿಲ್ಲುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸುತ್ತದೆ. ಬಿಜೆಪಿ ಮನೆಗೆ ಕಳುಹಿಸುವ ಕೆಲಸ ಆಗುತ್ತದೆ'' ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.
ಸವದತ್ತಿಯಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹಮ್ಮಿಕೊಂಡಿದ್ದ ಮತದಾದರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ''ವಿಧಾನಸಭೆ ಚುನಾವಣೆ ಸೆಮಿ ಫೈನಲ್ ಆಗಿತ್ತು. ಲೋಕಸಭೆ ಚುನಾವಣೆ ಫೈನಲ್ ಮ್ಯಾಚ್ ಆಗಿದೆ. ಫೈನಲ್‌ನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ. ಚುನಾವಣೆಯಲ್ಲಿ ಭರವಸೆ ಕೊಟ್ಟಿರುತ್ತೇವೆ ಎಷ್ಟೋ ಸಲ ಸರ್ಕಾರ ಬಂದು ಆರು ತಿಂಗಳಾದರೂ ಭರವಸೆಗಳು ಈಡೇರಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ'' ಎಂದು ತಿಳಿಸಿದರು.
ಹೆದರಿಕೆ, ಬೆದರಿಕೆ ಯಾವುದೂ ನಡೆಯುವುದಿಲ್ಲ- ಶಟ್ಟರ್ ಕಿಡಿ:''ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಮಾತನಾಡಲು ಏನೂ ಇಲ್ಲ. ಗ್ಯಾರಂಟಿಯನ್ನು ವಿರೋಧ ಮಾಡುವ ಸ್ಥಿತಿಯೂ ಪ್ರತಿಪಕ್ಷಕ್ಕೆ ಇಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜನರಿಗೆ ತೊಂದರೆ ಕೊಡುತ್ತಿದೆ. ತಮ್ಮ ವಿರೋಧ ಪಕ್ಷದವರನ್ನು ಹೆದರಿಸುತ್ತಿದ್ದಾರೆ. ಆದರೆ, ಈ ಹೆದರಿಕೆ, ಬೆದರಿಕೆ ಯಾವುದೂ ನಡೆಯುವುದಿಲ್ಲ. ಜನ ನಿಮ್ಮನ್ನು ಎಲ್ಲಿ ಕಳುಹಿಸಬೇಕೋ ಅಲ್ಲಿಗೆ ಕಳುಹಿಸಿಯೇ ತೀರುತ್ತಾರೆ ಎಂದು ಹರಿಹಾಯ್ದರು. ವಿನಯ ಕುಲಕರ್ಣಿಗೆ ಬಹಳ ತೊಂದರೆ ಕೊಡುತ್ತಾರೆ. ಆದರೆ, ಕುಲಕರ್ಣಿಗೆ ಒಳ್ಳೆ ದಿನಗಳು ಬರುತ್ತವೆ. ಅವರಿಗೆ ತೊಂದರೆ ಕೊಟ್ಟವರಿಗೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ. ಮುಂದೆಯೂ ಅವರಿಗೆ ಜನರೇ ಉತ್ತರ ಕೊಡುತ್ತಾರೆ'' ಎಂದರು.