ಧಾರವಾಡ:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರ ವೀರಪ್ಪ ಮೋಯ್ಲಿ ಅವರಿಂದ ಹಿಡಿದು ಈವರೆಗೂ ಎಲ್ಲಾ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟಿದ್ದೇವೆ. ಮಠಕ್ಕೆ ಕರೆಸಿಕೊಂಡು ಸನ್ಮಾನ ಮಾಡಿಸುತ್ತಾ ಬಂದಿದ್ದೇವೆ. ಆದರೆ ಎಲ್ಲಾ ಸಿಎಂಗಳು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದರು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಯಾರೂ ಭರವಸೆ ಕೊಡಲಿಲ್ಲ. 20 ವರ್ಷದಿಂದ ಮನವಿ ಕೊಟ್ಟು ಕೊಟ್ಟು ಸಾಕಾಗಿದೆ. ಈಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಲ್ಲೂ ಮನವಿ ಮಾಡುತ್ತೇವೆ. ಹೀಗಾಗಿ ಜನವರಿ 14ರೊಳಗೆ ಮೀಸಲಾತಿ ನೀಡಬೇಕು. ಏಕೆಂದರೆ ಮೀಸಲಾತಿ ವಿಚಾರದ ಹಕ್ಕೊತ್ತಾಯಕ್ಕೆ ಆಗ್ರಹಿಸಿ ಜ. 14ರಿಂದ ಕೂಡಲ ಸಂಗಮದಿಂದ ಪಾದಯಾತ್ರೆ ಆರಂಭಿಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ಕೇಂದ್ರ ಇಲ್ಲವೇ ರಾಜ್ಯದ ಮೀಸಲಾತಿಗಳ ಪೈಕಿ ಒಂದಕ್ಕೆ ಮೀಸಲಾತಿ ನೀಡಲು ಸಿಎಂ ಶಿಫಾರಸು ಮಾಡಬೇಕು. ಅವರು ಕೊಟ್ಟ ಮಾತು ಈಡೇರಿಸಬೇಕು. ನಾವು ಮಾಡುವ ಪಾದಯಾತ್ರೆ ಬಿಎಸ್‌ವೈಗೆ ಮುಜುಗರ ತರುವಂತಹುದು. ಲಿಂಗಾಯತ ಸಿಎಂ ಇದ್ದಾಗ ಪಂಚಮಸಾಲಿ ಗುರುಗಳು ಪಾದಯಾತ್ರೆ ಮಾಡಿದರೆ ಪಕ್ಷಕ್ಕೂ ಮುಜುಗರವಾಗುತ್ತದೆ ಎಂದರು.
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಆರಂಭದಲ್ಲೇ 2 ಲಕ್ಷ ಜನ ಸೇರುತ್ತಾರೆ. ಬೆಂಗಳೂರಿನಲ್ಲಿ ಹತ್ತು ಲಕ್ಷ ಜನ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ನೀವು ಹೇಳಿದ ಮಾತು ಕೇಳಿ ಮತ ಕೊಟ್ಟಿದ್ದೇವೆ. ನೀವು ಮಂತ್ರಿ ಸ್ಥಾನ ಯಾರಿಗೆ ಯಾವಾಗ ಕೊಡುತ್ತಿರೋ ನಮಗೆ ಬೇಕಾಗಿಲ್ಲ. ಮಠಕ್ಕೆ ಅನುದಾನ ಸಹ ಕೇಳುತ್ತಿಲ್ಲ. ನಮ್ಮ ಮೀಸಲಾತಿ ಕೊಟ್ಟರೆ ಸಾಕು ಎಂದರು.
ಮೀಸಲಾತಿ ಕೊಟ್ಟರೆ ಚೆನ್ನಮ್ಮನಂತೆ ಬಿಎಸ್‌ವೈ ಅವರನ್ನು ಗೌರವಿಸುತ್ತೇವೆ. ಪಾದಯಾತ್ರೆ ವೇಳೆ ಕ್ರಾಂತಿಯಾದರೆ ಅದಕ್ಕೆ ಹೊಣೆ ಸರ್ಕಾರವೇ ಆಗಿರಲಿದೆ. ಸುಮಾರು ಎರಡು ಸಾವಿರ ಬಿಸಿ ರಕ್ತದ ಯುವಕರು ಇರುತ್ತಾರೆ. ಹೀಗಾಗಿ ಶೀಘ್ರವೇ ಸಿಎಂ ಬೇಡಿಕೆ ಈಡೇರಿಸಬೇಕು ಎಂದು ಎಚ್ಚರಿಸಿದರು.