ಧಾರವಾಡ :ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ, ಏತ ನೀರಾವರಿ, ಕೆರೆ ತುಂಬುವ ಹಾಗೂ ಹಳ್ಳದ ಹರಿವಿನ ವ್ಯಾಪ್ತಿಯಲ್ಲಿ ಹೂಳು ಎತ್ತುವ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ಡ್ರೋಣ್ ಹಾಗೂ ಡಿಜಿಪಿಎಸ್ ಉಪಕರಣಗಳಿಂದ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ.
ಒಂದು ತಿಂಗಳ ಅವಧಿಯಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡು, ಸೆಪ್ಟೆಂಬರ್ ಅಂತ್ಯದೊಳಗೆ ವಿಸ್ತೃತ ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನವಲಗುಂದ ತಾಲೂಕಿನ ಶಿರೂರು ಗ್ರಾಮದ ಬಳಿ ಯೋಜನೆಯ ಸರ್ವೆ ಕಾರ್ಯದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಸಚಿವರು, ಯೋಜನೆಯಿಂದ ಧಾರವಾಡ ಹಾಗೂ ನವಲಗುಂದ ತಾಲೂಕಿನ ಸುಮಾರು 10 ಸಾವಿರ ಹೆಕ್ಟೇರ್ ಜಮೀನಿಗೆ ನೀರಾವರಿ ಕಲ್ಪಿಸುವ ರೈತರ ಬಹುದಿನದ ಕನಸು ನನಸು ಮಾಡಲು ಈ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯೋಜನೆಯ ಹಿನ್ನೆಲೆ :ತುಪ್ಪರಿಹಳ್ಳವು ಬೆಳಗಾವಿ ಜಿಲ್ಲೆ ಕಿತ್ತೂರಿನ ಅವರಾದಿ ಗ್ರಾಮದ ಬಳಿ ಉಗಮವಾಗಿ ಧಾರವಾಡ ಹಾಗೂ ನವಲಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 82 ಕಿ.ಮೀ ಹರಿದು ನವಲಗುಂದ ಪಟ್ಟಣದ ಹತ್ತಿರ ಬೆಣ್ಣೆ ಹಳ್ಳಕ್ಕೆ ಸೇರುತ್ತದೆ.
ತುಪ್ಪರಿಹಳ್ಳ ಜಲಾನಯನ ಪ್ರದೇಶದ ಭಾಗದಲ್ಲಿ ಸರಾಸರಿ 550 ಮಿ.ಮೀ. ಮಳೆಯ ಪ್ರಮಾಣ ಹೊಂದಿರುತ್ತದೆ. ತುಪ್ಪರಿಹಳ್ಳದಲ್ಲಿ ಸುಮಾರು 3 ಟಿಎಂಸಿ ಸಾಮರ್ಥ್ಯದ ನೀರು ಪೋಲಾಗಿ ಹರಿದು ಬೆಣ್ಣೆ ಹಳ್ಳ ಸೇರುತ್ತದೆ. ಹಳ್ಳವು ಸಾಕಷ್ಟು ಒತ್ತುವರಿಯಾಗಿದ್ದು ದಿಢೀರನೇ ನೀರು ಹೆಚ್ಚಿ ಹಳ್ಳದ ಬದಿಯ ಗ್ರಾಮಗಳಿಗೆ ಮತ್ತು ಹೊಲಗಳಿಗೆ ನುಗ್ಗಿ ಪ್ರವಾಹ ಉಂಟು ಮಾಡಿ ಪ್ರತಿವರ್ಷ ಹಳ್ಳವು ಸಾಕಷ್ಟು ಹಾನಿ ಉಂಟು ಮಾಡುತ್ತದೆ.
2010ರಲ್ಲಿ ಬೆಣ್ಣೆ ಹಳ್ಳ ಹಾಗೂ ತುಪ್ಪರಿಹಳ್ಳ ಪ್ರವಾಹ ನಿಯಂತ್ರಣ ಯೋಜನೆಯನ್ನು ಜಲ ಸಂಪನ್ಮೂಲ ಇಲಾಖೆಗೆ ವರ್ಗಾಯಿಸಿ ನೀರಾವರಿ ತಜ್ಞರಾದ ಪರಮಶಿವಯ್ಯರವರ ನೇತೃತ್ವದಲ್ಲಿ ವರದಿ ಸಲ್ಲಿಸಲು ಸಮಿತಿ ರಚಿಸಲಾಗಿತ್ತು. ಈ ವರದಿಯು 2012ರಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಈ ವರದಿ ಪ್ರಕಾರ 2017ರಲ್ಲಿ ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಯೋಜನಾ ವರದಿ ತಯಾರಿಸಲು ಇಆಯ್ ಟೆಕ್ನಾಲಾಜಿಸ್ ಬೆಂಗಳೂರುರವರಿಗೆ ಟೆಂಡರ್ ಮುಖಾಂತರ ವಹಿಸಲಾಗಿರುತ್ತದೆ. 153 ಕೋಟಿ ರೂ.ಗಳ ವಿವರವಾದ ಯೋಜನಾ ವರದಿಯನ್ನು ಈಗಾಗಲೇ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಂದಾಜು ಪರಿಶೀಲನಾ ಸಮಿತಿಗೆ ಮಂಡಿಸಲಾಗಿದೆ.
ಈ ವೇಳೆ ಧಾರವಾಡ ಶಾಸಕ ಅಮೃತ ದೇಸಾಯಿ, ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಲಪ್ರಭಾ ಬಲದಂಡೆ ಯೋಜನೆ ಅಧೀಕ್ಷಕ ಇಂಜಿನಿಯರ್ ರಾಜೇಶ ಅಮ್ಮಿನಭಾವಿ, ಎಸ್ಪಿ ವರ್ತಿಕಾ ಕಟಿಯಾರ್, ಡಿವೈಎಸ್ಪಿ ರವಿನಾಯ್ಕ, ತಹಶೀಲ್ದಾರ್ ನವೀನ ಹುಲ್ಲೂರ ಸೇರಿ ಮತ್ತಿತರರು ಇದ್ದರು.