ಧಾರವಾಡ:ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹರಿಹಾಯ್ದಿದ್ದಾರೆ. ಅವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ವಿನಯ ಕುಲಕರ್ಣಿ ಆಪ್ತ ಪ್ರಶಾಂತ, ಈಶ್ವರ ಶಿವಳ್ಳಿ, ಎಗನಗೌಡರ, ಪ್ರದೀಪ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ. ವಿನಯ ಕುಲಕರ್ಣಿ ಪರವಾಗಿ ಸ್ಟೇಟಸ್ ಹಾಕಿಕೊಂಡ್ರೆ 107 ಸೆಕ್ಷನ್ ಕೇಸ್ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಬಿಸ್ನೆಸ್ ಬಗ್ಗೆ ಪ್ರಶ್ನೆ ಕೇಳೋದನ್ನು ಬಿಟ್ಟು ಪಕ್ಷದ ಸ್ಟ್ಯಾಟರ್ಜಿ ಬಗ್ಗೆ ಪ್ರಶ್ನೆ ಕೇಳ್ತಿದ್ದಾರೆ. ನಿಮ್ಮ ಸ್ಟ್ಯಾಟರ್ಜಿ ಏನು, ಸೋರ್ಸ್ ಎಲ್ಲಿಂದ ಬರ್ತಾ ಇದೆ ಅಂತ ಕೇಳ್ತಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಯಾಕೆ ಬಂದ್ರಿ ಅನ್ನೋ ಪ್ರಶ್ನೆಯನ್ನು ಐಟಿ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಅಪಾದನೆ ಮಾಡಿದರು. ಕಾರ್ಯಕರ್ತರನ್ನು ಎರಡು ದಿವಸಗಳಷ್ಟು ಹಿಡಿದು ಕೂರಿಸಿ, ಚುನಾವಣೆಯಲ್ಲಿ ಕೆಲಸ ಮಾಡದಂತೆ ಹತ್ತಿಕ್ಕಲಾಗುತ್ತಿದೆ. ಇದು ರಾಜಕೀಯ ಷಡ್ಯಂತ್ರ ಆಲ್ವಾ? ಚುನಾವಣೆ ವೇಳೆ ಈ ರೀತಿ ಮಾಡೋದು ಎಷ್ಟು ಸರಿ ಇದಕ್ಕೆ ಉತ್ತರ ಧಾರವಾಡ ಗ್ರಾಮೀಣ ಕ್ಷೇತ್ರದ ಜನರು ಕೊಡಬೇಕು. ರಾಜಕೀಯವಾಗಿ ಹತ್ತಿಕುವ ಕೆಲಸ ಮಾಡಲಾಗುತ್ತಿದೆ. ಚುನಾವಣೆ ವೇಳೆ ನಮಗೆ ಡಿಸ್ಟರ್ಬ್ ಮಾಡಲು ಈ ರೀತಿ ಮಾಡಲಾಗುತ್ತಿದೆ. ಅಧಿಕಾರಿಗಳು ಬಿಜೆಪಿ ಏಜೆಂಂಟ್ ರಂತೆ ವರ್ತನೆ ಮಾಡುತಿದ್ದಾರೆ ಎಂದು ದೂರಿದರು.
ನಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳು ಯಾರೂ ಸ್ಪಂದನೆ ಮಾಡ್ತಿಲ್ಲ. ವಿನಯ ಕುಲಕರ್ಣಿ ಜಿಲ್ಲೆಯ ಹೊರಗಡೆ ಇದ್ದಾರೆ. ನಾವೇನು ಮಾಡಿದರೂ ನಡಿಯುತ್ತೆ ಅನ್ನೋ ರೀತಿ ಅಧಿಕಾರಿಗಳ ವರ್ತನೆ ಇದೆ. ಇದು ಸ್ವಯಂ ಪ್ರೇರಿತ ದಾಳಿ ಅಲ್ಲ. ಬಿಜೆಪಿಯವರು ಮಾಡಿಸುತ್ತಿರುವಂತ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿನಯ್ ಕುಲಕರ್ಣಿಯ ಆಪ್ತನಿಗೆ ಐಟಿ ನೋಟಿಸ್:ಮಾಜಿ ಸಚಿವ ವಿನಯ್ ಕುಲಕರ್ಣಿಯ ಮತ್ತೊಬ್ಬ ಆಪ್ತನಿಗೆ ಐಟಿ ಇಲಾಖೆ ನೋಟಿಸ್ ನೀಡಿದೆ. ಶನಿವಾರ ಬೆಳಗ್ಗೆ 10 ಗಂಟೆಗೆ ಹುಬ್ಬಳ್ಳಿ ಐಟಿ ಕಚೇರಿಗೆ ಆಗಮಿಸುವಂತೆ ವಿನಯ‌್ ಪರ ಚುನಾವಣಾ ಪ್ರಚಾರದಲ್ಲಿ ಓಡಾಡುತ್ತಿದ್ದ ಅರವಿಂದ ಏಗನಗೌಡರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.