ಹುಬ್ಬಳ್ಳಿ:ಎಲ್ಲರಿಗೂ ಸಹ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇರುವುದು ಸಹಜ. ಅದು ಅವಕಾಶ ಸಿಕ್ಕಾಗ ಮಾತ್ರ ಆಗುತ್ತಾರೆ. ಆದರೆ ನನಗೂ ಕೃಷಿ ಸಚಿವ ಆಗುವ ಆಸೆಯಿದೆ ಎಂದು ನವಲಗುಂದ ಶಾಸಕ ಎನ್ ಹೆಚ್ ಕೋನರೆಡ್ಡಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರಿಗೆ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಅಂದರೆ ನನ್ನನ್ನು ಸಹ ಪರಿಗಣಿಸಬೇಕು. ನಮ್ಮ ಪಕ್ಷದ ವರಿಷ್ಠರಿಗೆ ಇದು ನನ್ನ ಮನವಿ. ನನ್ನ ಬಳಿ ಹೊಸ ಡ್ರೆಸ್ ಯಾವಾಗಲೂ ಇರುತ್ತೆ. ನಾನು ರೈತ ಯಾವ ಡ್ರೆಸ್ ಆದರೇನು. ಜಿಲ್ಲೆಯಲ್ಲಿ ರಾಜಕೀಯ ಕ್ಷೇತ್ರದಲ್ಲಿ ನನಗಿಂತ ಹಿರಿಯರಾದ ವಿನಯ ಕುಲಕರ್ಣಿ ಇದ್ದಾರೆ, ಸಂತೋಷ ಲಾಡ್ , ಪ್ರಸಾದ ಅಬ್ಬಯ್ಯ ಇದ್ದಾರೆ, ಅವರಲ್ಲಿ ಯಾರೂ ಆದ್ರು ಅಷ್ಟು ಸಂತೋಷ ಪಡ್ತೇನಿ. ಅವರು ಆದರೆ ನಾನು ಸಚಿವ ಇದ್ದಾಂಗ ಎಂದು ಹೇಳಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಸಚಿವ ಸ್ಥಾನ ನೀಡಬೇಕು. ಅವರಿಗೆ ಸಚಿವ ಸ್ಥಾನ ಕೊಟ್ಟರೆ ಏನು ತಪ್ಪಿಲ್ಲ. ಅವರು ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕರು. ಹಿರಿಯರು ಮತ್ತು ಮಾಜಿ ಸಿಎಂ ಇದ್ದಾರೆ. ಅವರಿಗೆ ಸರಿಸಮಾನವಾಗಿರುವ ಹುದ್ದೆ ನೀಡುವುದು ಸೂಕ್ತ ಎಂದು ಹೇಳಿದರು.
ಮಹದಾಯಿ ವಿಚಾರವಾಗಿ ಬಿಜೆಪಿ ಯಾವುದೇ ಟೆಂಡರ್ ಕರೆದಿಲ್ಲ:ಐದು ಗ್ಯಾರಂಟಿ ಜಾರಿಗೆ ಮಾಡೇ ಮಾಡ್ತೇವಿ. ಸ್ವಲ್ಪ ಕಾಲಾವಕಾಶ ಬೇಕು. ಐದು ಗ್ಯಾರಂಟಿ ಜಾರಿ ಆಗದಿದ್ದರೆ ರಾಜಕೀಯ ಸನ್ಯಾಸತ್ವ ಸ್ವೀಕಾರ ಮಾಡುವೆ. ಮಹದಾಯಿ ನೀರಿಗಾಗಿ ಬಿಜೆಪಿ ಹೇಳಿರುವ ಮಾಹಿತಿ ಪರಿಶೀಲನೆ ಮಾಡಲಾಗುತ್ತಿದೆ. ಮಹದಾಯಿ ಟೆಂಡರ್ ಕುರಿತಾಗಿ ಮೊದಲು ಅಧ್ಯಯನ ಮಾಡ್ತೇವಿ. ಅಧಿಕಾರಿಗಳ ಜತೆ ಚರ್ಚೆ ಮಾಡಿ, ಮಹದಾಯಿ ಯೋಜನೆ ಯಾವುದೇ ಪರಿಸ್ಥಿತಿಯಲ್ಲಿ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈಗಾಗಲೇ ಹುಬ್ಬಳ್ಳಿಯಲ್ಲಿ ಇಂಜಿನಿಯರ್ ಸಭೆ ಮಾಡಿದ್ದು, ಹಲವಾರು ಸಲಹೆ ನೀಡಿದ್ದಾರೆ. ಸಚಿವ ಸಂಪುಟ ರಚನೆ ಬಳಿಕ ಯಾರೂ ನೀರಾವರಿ ಸಚಿವರು ಯಾರು ಆಗ್ತಾರೊ, ಅವರ ಜತೆಗೆ ಚರ್ಚಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿ ಎಷ್ಟು ಸುಳ್ಳು ಹೇಳಿದ್ದಾರೆ. ಎಷ್ಟು ಸತ್ಯ ಹೇಳಿದ್ದಾರೆ ಅಂತ ಸಮಾಲೋಚನೆ ಮಾಡಲಾಗುತ್ತಿದೆ. ಮಹದಾಯಿ ವಿಚಾರವಾಗಿ ಬಿಜೆಪಿ ಯಾವುದೇ ಟೆಂಡರ್ ಕರೆದಿಲ್ಲ. ಕೇವಲ ನೋಟಿಸ್ ತೋರಿಸಲಾಗುತ್ತಿದೆ.ಅರಣ್ಯ ಇಲಾಖೆ ಯಾವುದೇ ಕ್ಲಿಯರೆನ್ಸ್ ನೀಡಿಲ್ಲ ಎಂದು ಹೇಳಿದರು.
ಬಜರಂಗದಳ ಬ್ಯಾನ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ಏನಿದ್ದರೂ ರೈತರ ಮತ್ತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ಮಾಡುತ್ತಿರುವೆ. ನನ್ನ ಕ್ಷೇತ್ರದ ಅನುದಾನ ಬಗ್ಗೆ, ರಸ್ತೆಗಳ ಸುಧಾರಣೆ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಿರುವೆ.ಅದರ ಬಗ್ಗೆ ದೊಡ್ಡ ದೊಡ್ಡವರು ಏನು ಮಾತನಾಡಿದ್ದಾರೆ ಅವರನ್ನೇ ಕೇಳಿ. ನನಗೆ ಅದರ ಬಗ್ಗೆ ಏನು ಗೊತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂಓದಿ:ಸೋನಿಯಾ, ರಾಹುಲ್ ಭೇಟಿಯಾದ ಸಿಎಂ: 24 ಸಂಭವನೀಯ ನೂತನ ಸಚಿವರ ವಿವರ ಇಲ್ಲಿದೆ..