ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯ ಈದ್ಗಾ ವಿವಾದ.. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮೂರು ದಿನ ಗಡುವು - ಈಟಿವಿ ಭಾರತ ಕನ್ನಡ ಸುದ್ದಿ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿಬಂದಿದೆ.

ಹಿಂದೂಪರ ಸಂಘಟನೆ ಕಾರ್ಯಕರ್ತರು
ಹಿಂದೂಪರ ಸಂಘಟನೆ ಕಾರ್ಯಕರ್ತರು

By

Published : Aug 18, 2022, 3:27 PM IST

ಹುಬ್ಬಳ್ಳಿ:ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಒತ್ತಡಗಳು ಹೆಚ್ಚಾಗಿವೆ. ಮತ್ತೊಂದೆಡೆ ಹುಬ್ಬಳ್ಳಿಯಲ್ಲಿ ಮತ್ತೆ ಈದ್ಗಾ ವಿವಾದ ಮುನ್ನಲೆಗೆ ಬಂದಿದೆ. ಹೀಗಾಗಿ, ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ಮೂರು ದಿನಗಳ‌ ಗಡುವು ನೀಡಿವೆ.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಫೈಟ್: ರಾಷ್ಟ್ರಧ್ವಜಾರೋಹಣ ವಿಚಾರದಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ಕಳೆದ ಎರಡು ದಶಕಗಳ ಹಿಂದೆ ದೊಡ್ಡ ವಿವಾದದನ್ನೇ ಸೃಷ್ಠಿಸಿತ್ತು. ಅನೇಕ ಘಟಾನುಘಟಿಗಳ‌ ನೇತೃತ್ವದಲ್ಲಿ 90 ರ ದಶಕದಲ್ಲಿ ನಡೆದಿದ್ದ ಆ ಹೋರಾಟದ ಕಿಚ್ಚು ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಹೀಗೆ ವಿವಾದಕ್ಕೆ ಸಾಕ್ಷಿಯಾಗಿದ್ದ ಈ ಐತಿಹಾಸಿಕ ಈದ್ಗಾ ಮೈದಾನದ ಪ್ರಕರಣದ ಕಾವು ತಣ್ಣಗಾಗಿದೆ.

ಎರಡನೇ ಹಂತದ ಹೋರಾಟ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ಕಳೆದೊಂದು ವಾರದಿಂದ ಹುಬ್ಬಳ್ಳಿಯ ಹಲವು ಹಿಂದೂಪರ ಸಂಘಟನೆಗಳು ಹೋರಾಟ ಮಾಡ್ತಿವೆ. ಇಲ್ಲಿನ ರಾಣಿ ಚೆನ್ನಮ್ಮ ಮೈದಾನ ಗಜಾನನೋತ್ಸವ ಸಮಿತಿ ಕಾರ್ಯಕರ್ತರು ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ‌ ಕಾರ್ಯಕರ್ತರು ಇದೀಗ ಎರಡನೇ ಹಂತದ ಹೋರಾಟ ಆರಂಭಿಸಿದ್ದಾರೆ.

ಈದ್ಗಾ ವಿವಾದ ಮತ್ತೆ ಮುನ್ನಲೆಗೆ:ಬೆಂಗಳೂರಿನ‌ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ವಿಚಾರದಲ್ಲಿ ನಡೆಯುತ್ತಿರೋ ವಿವಾದದ ಬೆನ್ನಲ್ಲೇ ಇದೀಗ ಹುಬ್ಬಳ್ಳಿಗೂ ಈ ವಿವಾದ ವ್ಯಾಪಿಸಿದೆ. ಈ ಬಗ್ಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮೊನ್ನೆಯಷ್ಟೇ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಗಣೆಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಆಗ್ರಹಿಸಿದ್ದರು.‌ ಆದರೆ, ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮೂರು ದಿನಗಳ ಕಾಲ ಗಡುವು ನೀಡಿದ್ದು, ಈದ್ಗಾ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.

ಸುಪ್ರೀಂ‌ಕೋರ್ಟ್ ಆದೇಶ: ಪ್ರಮುಖವಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯಕ್ಕೆ ವರ್ಷಕ್ಕೆ ಎರಡು ಬಾರಿಯಂತೆ ಪ್ರಾರ್ಥನೆ ಹಾಗೂ ವರ್ಷದಲ್ಲಿ ಎರಡು ಬಾರಿ ಧ್ವಜಾರೋಹಣ ಆಚರಣೆಗೆ ಈ ಹಿಂದೆಯೇ ಸುಪ್ರೀಂ‌ಕೋರ್ಟ್ ಆದೇಶ ನೀಡಿತ್ತು. ಆದ್ರೆ ಮುಸ್ಲಿಂ ಬಾಂಧವರಿಗೆ ಧಾರ್ಮಿಕ ಆಚರಣೆಗಾಗಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಹಿಂದೂ ಸಮುದಾಯಕ್ಕೂ ಸಹ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಹಿಂದೂಪರ ಸಂಘಟನೆಗಳ‌ ಕಾರ್ಯಕರ್ತರು ಮನವಿ ಮಾಡಿದ್ರು.

ನಿರ್ಧಾರ ತೆಗೆದುಕೊಳ್ಳುತ್ತಾರೆ: ಈ ಮನವಿಗೆ ಸಕಾರಾತ್ಮಕವಾದ ಸ್ಪಂದನೆ‌ ನೀಡದಿದ್ದಲ್ಲಿ ಉಗ್ರ ಹೋರಾಟ ಎಚ್ಚರಿಕೆಯನ್ನೂ ಸಹ ನೀಡಿದ್ರು. ಈದ್ಗಾ ಮೈದಾನ‌ ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ. ಈ ವಿಚಾರದಲ್ಲಿ ಪಾಲಿಕೆಯ ಅಧಿಕಾರಿಗಳಿಗೆ ಅದೇ ರೀತಿ ಜನಪ್ರತಿನಿಧಿಗಳಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸ್ವತಂತ್ರ ಅಧಿಕಾರವಿದೆ‌. ಹೀಗಾಗಿ, ಪಾಲಿಕೆಯ ಅಧಿಕಾರಿಗಳೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಾದ ಎದ್ದಿದೆ.

ಹೀಗಾಗಿ, ಇದುವರೆಗೂ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇದೀಗ ಮೂರು ದಿನಗಳ ಕಾಲ ಗಡುವು ನೀಡಿದ ಹಿನ್ನೆಲೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಓದಿ:ಬಿಬಿಎಂಪಿ ವಾರ್ಡ್ ಮೀಸಲಾತಿ ಹಂಚಿಕೆ ಖಂಡಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ... ಕೈ ಮುಖಂಡರು ಪೊಲೀಸ್​ ವಶಕ್ಕೆ

ABOUT THE AUTHOR

...view details