ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪರ ಕಾರ್ಯಗಳು ಹಾಗೂ ಹೊಸ ಹೊಸ ಯೋಜನೆಗಳ ಮೂಲಕ ಜನಮನ್ನಣೆ ಪಡೆದಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಇದೀಗ ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ರೂಪುಗೊಂಡಿದೆ.
ಹೌದು. ಇದೀಗ ದೇಶದ ಕೆಲವೇ ಕೆಲವು ಹಸಿರು ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಕೂಡ ಒಂದಾಗಿದೆ. ಈ ವಿಚಾರವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟ್ವೀಟರ್ ಮೂಲಕ ಹಂಚಿಕೊಂಡಿದ್ದು, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ 8 ಮೆ.ವ್ಯಾ. ಗ್ರಿಡ್-ಸಂಪರ್ಕಿತ ಸೌರ ವಿದ್ಯುತ್ ಸ್ಥಾವರದಿಂದಾಗಿ ಶೇ.100ರಷ್ಟು ಹಸಿರು ವಿಮಾನ ನಿಲ್ದಾಣವಾಗಿದೆ. ಈ ಸ್ಥಾವರದಿಂದ ಉತ್ಪತ್ತಿಯಾಗುವ ಸೌರಶಕ್ತಿಯನ್ನು ಹುಬ್ಬಳ್ಳಿಯ ಗ್ರಿಡ್‌ಗೆ ನೀಡಲಾಗುತ್ತಿದೆ. ವಿಮಾನ ನಿಲ್ದಾಣದ 38 ಎಕರೆ ಪ್ರದೇಶದಲ್ಲಿ ಸೌರಶಕ್ತಿ ಘಟಕ ಸ್ಥಾಪಿಸಲಾಗಿದ್ದು, ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ತಾರಿಹಾಳದ ಎಲೆಕ್ಟ್ರಿಕಲ್ ಗ್ರಿಡ್‌ನೊಂದಿಗೆ ನ.8ರಂದು ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಕಲಬುರಗಿ ವಿಮಾನ ನಿಲ್ದಾಣಗಳಲ್ಲೂ ಬಳಕೆಯಾಗಲಿದೆ.
ಇದನ್ನೂ ಓದಿ:ಹುಬ್ಬಳ್ಳಿ-ದೆಹಲಿ ವಿಮಾನದಲ್ಲಿ ಉತ್ತರಕರ್ನಾಟಕ ಭಾಷಾ ಸೊಗಡು: ಪೈಲಟ್ ಅನೌನ್ಸ್ಮೆಂಟ್ ವಿಡಿಯೋ ವೈರಲ್