ಹುಬ್ಬಳ್ಳಿ:ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಬಿಜೆಪಿ ರಾಜ್ಯದ ಜನರನ್ನು ನಂಬಿಸಿ ದ್ರೋಹ ಮಾಡಿದೆ. ಅವರು ರಾಜ್ಯಕ್ಕೆ ಒಂದು ಲಕ್ಷ ಐವತ್ತು ಸಾವಿರ ಕೋಟಿ ರೂಪಾಯಿ ಕೊಡುತ್ತೇವೆಂದು ಪ್ರಣಾಳಿಕೆಯಲ್ಲಿ ಹೇಳಿದ್ದರು. ಕೇವಲ 45 ಸಾವಿರ ಕೋಟಿ ರೂ ಖರ್ಚು ಮಾಡಿದ್ದಾರೆ. ಮಿಕ್ಕಿದ್ದು ಏನಾಯ್ತು ಬೊಮ್ಮಾಯಿಯವರೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.
ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮಹದಾಯಿ ಆಂದೋಲನದಲ್ಲಿ ಮಾತನಾಡಿದ ಅವರು, ಈ ಬಾರಿ ನಾವು ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಎಷ್ಟೇ ಅಪಪ್ರಚಾರ, ಆಪರೇಷನ್ ಕಮಲ, ಹಣದ ಹೊಳೆ ಹರಿಸಿದರೂ ನಾವೇ ಅಧಿಕಾರಕ್ಕೆ ಬರೋದು. ಅಧಿಕಾರಕ್ಕೆ ಬಂದು ಎರಡೇ ವರ್ಷದಲ್ಲಿ ಮಹದಾಯಿ ತಿರುವು ಯೋಜನೆ ಮುಗಿಸ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರಿಗೆ ಸುಳ್ಳು ಹೇಳೋ, ಲೂಟಿ ಹೊಡೆಯೋ ಸರ್ಕಾರವನ್ನು ಬೇರುಸಹಿತ ಕಿತ್ತು ಹಾಕಬೇಕು. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಉಳಿಸಿ. ಇದು 40% ಸರ್ಕಾರ. ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ವೀಕೆಸ್ಟ್ ಮುಖ್ಯಮಂತ್ರಿ. ಭಾಷಣದಲ್ಲಿ ಮಾತ್ರ ಧಮ್, ತಾಕತ್ತು ಬಗ್ಗೆ ಮಾತಾಡ್ತಾರೆ. ನರೇಂದ್ರ ಮೋದಿಯವರ ಬಳಿ ಹೋಗಿ ನಡುಗುತ್ತಾರೆ ಎಂದು ವ್ಯಂಗ್ಯವಾಡಿದರು.
ಖಾದ್ರಿ ದರ್ಗಾ ಮುಟ್ಟಬೇಡಿ ಅಂದಿದ್ದೆ:ಹುಬ್ಬಳ್ಳಿಯ ಖಾದ್ರಿ ದರ್ಗಾ ಮುಟ್ಟಬೇಡಿ ಅಂದಿದ್ದೆ. ಮುಸ್ಲಿಂ ಬಾಂಧವರನ್ನು ಕರೆದು ಮಾತಾಡಿ ಅಂತಾ ಬೊಮ್ಮಾಯಿಗೆ ತಿಳಿಸಿದ್ದೆ. ನಂತರ ಪ್ರಲ್ಹಾದ್ ಜೋಶಿ ಮಾತಿಗೆ, ಒತ್ತಡಕ್ಕೆ ಮಣಿದರು. ದರ್ಗಾ ಒಡೆಯಲು ಜೋಶಿ ನೇರ ಕಾರಣ. ದರ್ಗಾ ಒಡೆಯುವ ಅವಶ್ಯಕತೆ ಇರಲಿಲ್ಲ, ಟೈಮ್ ಕೊಟ್ಟರೆ ಏನಾಗ್ತಿತ್ತು? ಈ ದ್ವೇಷದ ರಾಜಕಾರಣ ಇನ್ನೆರಡು ಮೂರು ತಿಂಗಳು ಮಾಡಬಹುದು ಎಂದರು.