ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾಹಿತಿ ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಕರ ಸಂಗ್ರಹ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದೆಷ್ಟೋ ನಿಯಮಗಳನ್ನು ಜಾರಿಗೆ ತಂದು ತೆರಿಗೆ ವಸೂಲಿಗೆ ಮುಂದಾದರೂ ಕೂಡ ಸಂಪೂರ್ಣ ಪ್ರಮಾಣದಲ್ಲಿ ತೆರಿಗೆ ವಸೂಲಿ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅವಳಿ ನಗರದ ವಾಣಿಜ್ಯ ಉದ್ಯಮಿಗಳು ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಪಾಲಿಕೆಯ ಆರ್ಥಿಕತಗೆ ದೊಡ್ಡ ಹೊಡೆತ ಬಿದ್ದಿದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕರ ವಸೂಲಿಗೆ ಸಾಕಷ್ಟು ಅಭಿಯಾನ ಹಾಗೂ ಪಾವತಿಗೆ ರಿಯಾಯಿತಿ ಕೂಡ ನೀಡುತ್ತಾ ಬಂದಿದೆ. ಆದರೆ, ಸಾಮಾನ್ಯ ನಾಗರಿಕರು ನೂರು ಇನ್ನೂರು ತೆರಿಗೆ ಪಾವತಿಸಿ ತಮ್ಮ ಜವಾಬ್ದಾರಿ ಮೆರೆಯುತ್ತಿದ್ದಾರೆ. ಆದರೆ ವಾಣಿಜ್ಯ ಉದ್ಯಮಿಗಳು ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದಾರೆ. ಅಲ್ಲದೇ ಪಾಲಿಕೆಯ ನಿರ್ದೇಶನಕ್ಕೂ ಕ್ಯಾರೇ ಎನ್ನುತ್ತಿಲ್ಲ.
ಪಾಲಿಕೆಗೆ 120 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ:ಈಗಾಗಲೇ ಒಂದು ಕೋಟಿ, ಎರಡು ಕೋಟಿ, ಐದು ಕೋಟಿ ರೂಪಾಯಿವರೆಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಉದ್ಯಮಿಗಳ ಒಟ್ಟಾರೆ ಲೆಕ್ಕಾಹಾಕಿದೆ, ಸುಮಾರು 45 ಕೋಟಿ ತೆರಿಗೆ ಬಾಕಿ ಉಳಿದಿದೆ. ಪಾಲಿಕೆಗೆ 120 ಕೋಟಿಯಷ್ಟು ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಅದರಲ್ಲಿ ಶೇಕಾಡಾ 72 ತೆರಿಗೆ ಪಾವತಿಯಾಗಿದ್ದರೇ ಉಳಿದ 40 ರಿಂದ 45 ಕೋಟಿ ಹಣ ಉದ್ಯಮಿಗಳಿಂದಲೇ ಬಾಕಿ ಉಳಿದಿದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮಾಹಿತಿ ನೀಡಿದ್ದಾರೆ.
ಕಂದಾಯ ಅಧಿಕಾರಿಗಳು ನೋಟಿಸ್, ತೆರಿಗೆ ಕಟ್ಟದೇ ಇರುವವರ ವಿರುದ್ಧ ಕ್ರಮ: ''ಪಾಲಿಕೆಯು ತೆರಿಗೆ ಸಂಗ್ರಹಕ್ಕೆ ವಿನಾಯಿತಿ ಸೇರಿದಂತೆ ಸಾಕಷ್ಟು ಅನುಕೂಲ ಕಲ್ಪಿಸಿದರೂ ಕೂಡ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ. ಆಯಾ ವಲಯದ ಕಂದಾಯ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ. ಹೀಗಾಗಿ ಕೆಲವರು ಕಟ್ಟುತ್ತಿದ್ದಾರೆ. ಆದರೆ, ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದ್ದು, ಕರ ಕಟ್ಟದವರ ಆಸ್ತಿ ಸೀಜ್ ಮಾಡಲಾಗುವುದು'' ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಶೇ. 5ರಷ್ಟು ಆಸ್ತಿ ತೆರಿಗೆ ಏರಿಕೆ ಮಾಡಿದ್ದ ಪಾಲಿಕೆ: 2022-23ರಲ್ಲಿ ಚಾಲ್ತಿಯಲ್ಲಿದ್ದ ಆಸ್ತಿ ತೆರಿಗೆಯ ಮೇಲೆ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ (2023-24ನೇ ಸಾಲಿಗೆ) ಶೇ. 5ರಷ್ಟು ಏರಿಕೆ ನಿಗದಿಪಡಿಸಲಾಗಿತ್ತು. ಅಂದರೆ, ಈಗಾಗಲೇ 2023ರ ವರ್ಷದಲ್ಲಿ ಆಸ್ತಿ ತೆರಿಗೆ ಪಾವತಿಸಿದವರು ಹೆಚ್ಚುವರಿಯಾದ ಶೇ. 5ರಷ್ಟು ಏರಿಕೆಯನ್ನು 2024-25ರ ಆಸ್ತಿ ತೆರಿಗೆ ಪಾವತಿಯೊಂದಿಗೆ ಸಂದಾಯ ಮಾಡಬೇಕಿತ್ತು. ರಾಜ್ಯ ಸರ್ಕಾರದ ಅಧಿಸೂಚನೆ ಅನ್ವಯ ಪ್ರತಿ ಆರ್ಥಿಕ ವರ್ಷಕ್ಕೆ ಶೇಕಡಾ 3ರಿಂದ 5ರವರೆಗೆ ಏರಿಕೆ ಮಾಡಲು ಪಾಲಿಕೆಗೆ ಅಧಿಕಾರವಿದೆ. 2022-23ನೇ ಸಾಲಿನಲ್ಲಿ ಶೇಕಡಾ 3ರಷ್ಟು ಏರಿಕೆ ಮಾಡಲಾಗಿತ್ತು. 2023-24ನೇ ಸಾಲಿಗೆ ವಾಸ, ವಾಣಿಜ್ಯ, ವಾಸೇತರ ಹಾಗೂ ವಾಣಿಜ್ಯೇತರ ಮತ್ತು ಎಲ್ಲ ಸ್ವರೂಪದ ಖಾಲಿ ಜಾಗಗಳಿಗೆ ಶೇಕಡಾ 5ರಷ್ಟು ಏರಿಕೆಯ ಪ್ರಸ್ತಾವವನ್ನು ಪಾಲಿಕೆ ಈ ಹಿಂದೆ ಸಿದ್ಧಪಡಿಸಿತ್ತು.
ಇದನ್ನೂ ಓದಿ:ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿಗಳ ರಚನೆ: ಸಿಎಂ ಸಿದ್ದರಾಮಯ್ಯ