ಹುಬ್ಬಳ್ಳಿ:ಬಾಡಿ ಬಿಲ್ಡಿಂಗ್ನಲ್ಲಿ ಏನಾದರೂ ಸಾಧಿಸಬೇಕು ಅಂತಾ ಕನಸು ಕಂಡ ಯುವಕನ ಸಾಧನೆ ಎಲ್ಲರ ಹುಬ್ಬೇರಿಸುವಂತಿದ್ದು, ಖಡಕ್ ರೊಟ್ಟಿ ತಿಂದು, ಜಗಜಟ್ಟಿಗಳನ್ನು ಮೀರಿಸುವಂತೆ ಬೆಳೆದಿರುವ ಯುವಕ ಈಗ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾನೆ.
ದೇಹ ದಂಡಿಸುವುದು ಅಷ್ಟು ಸುಲಭದ ಮಾತಲ್ಲ. ನಿರಂತರ ಪರಿಶ್ರಮ ಹಾಗೂ ಅದಕ್ಕೆ ತಕ್ಕನಾದ ಆಹಾರ ಬೇಕು. ಆದರೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಅವಿನಾಶ್ ಮಂಟೂರು ಎಂಬ ಯುವಕ ಬಡತನದಲ್ಲಿಯೇ ಬಾಡಿ ಬಿಲ್ಡಿಂಗ್ ಮಾಡಿ ಭರವಸೆ ಮೂಡಿಸುತ್ತಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಎಲ್ಲರ ಹುಬ್ಬೇರಿಸುವಂತೆ ಕಟ್ಟುಮಸ್ತಾದ ದೇಹಸಿರಿ ಸಂಪಾದಿಸಿದ್ದಾನೆ. ಕಾಲೇಜು ದಿನಗಳಲ್ಲಿಯೇ ಈ ಯುವಕ ಬಾಡಿ ಬಿಲ್ಡರ್ ಆಗಬೇಕು ಎಂಬ ಕನಸನ್ನು ನನಸು ಮಾಡಿದ್ದಾನೆ. ಹದಿನೆಂಟನೇ ವಯಸ್ಸಿನಲ್ಲಿ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಇಲ್ಲಿವರೆಗೂ ಹದಿನೈದು ವಿವಿಧ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅವಿನಾಶ್, ಕಳೆದ ವರ್ಷ ಜೂನಿಯರ್ ನ್ಯಾಷನಲ್ನಲ್ಲಿ ಭಾಗಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾನೆ.
ಅವಿನಾಶ್ ಮಂಟೂರ್ ಬಾಡಿ ಬಿಲ್ಡಿಂಗ್ ಮಾಡಲು ವಿದ್ಯಾಭ್ಯಾಸ ತ್ಯಾಗ ಮಾಡಿದ್ದಾನೆ. ಮುಂದಿನ ಸೀನಿಯರ್ ವಿಭಾಗದ ಮಿಸ್ಟರ್ ಇಂಡಿಯಾದಲ್ಲಿ ಭಾಗವಹಿಸಲು ಕಸರತ್ತು ನಡೆಸಿದ್ದಾನೆ. ಮನೆಯಲ್ಲಿ ಇವನಿಗೆ ಪ್ರೋತ್ಸಾಹ ನೀಡಲು ಕುಟುಂಬಸ್ಥರು ಸ್ಥಿತಿವಂತರಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂದು ಹುಬ್ಬಳ್ಳಿಯ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಾನೆ. ತಿಂಗಳಿಗೆ 8 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿರುವ ಅವಿನಾಶ್‌ಗೆ ಬಾಡಿ ಬಿಲ್ಡಿಂಗ್‌ಗಾಗಿ ಬೇಕಾಗುವ ಆಹಾರಕ್ಕೆ ಸಂಬಳ ಸಾಕಾಗುತ್ತಿಲ್ಲ. ಪ್ರೋತ್ಸಾಹ ಸಿಕ್ಕರೆ ಇಂಟರ್‌ನ್ಯಾಷನಲ್ ಕಾಂಪಿಟೇಶನ್‌ವರೆಗೂ ಭಾಗವಹಿಸುವ ಕನಸು ಕಾಣುತ್ತಿದ್ದಾನೆ.
ಕಳೆದ ವರ್ಷ ನಡೆದ ರಾಷ್ಟ್ರೀಯ ಜೂನಿಯರ್ಸ್ ವಿಭಾಗದಲ್ಲಿ 3ನೇ ರ್ಯಾಂಕ್ ಗಳಿಸಿದ್ದಾನೆ. ಯಾರ ಪ್ರೋತ್ಸಾಹ, ಹಣದ ಸಹಾಯವಿಲ್ಲದೆ ರೊಟ್ಟಿ-ಚಟ್ನಿ ತಿಂದೇ ಈ ಯುವಕ ತನ್ನ ದೇಹವನ್ನು ತಯಾರು ಮಾಡಿಕೊಂಡಿದ್ದು, ತನ್ನ ಸಾಧನೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾನೆ.