ಧಾರವಾಡ: ಎರಡು ದಿನಗಳ ಕಾಲ ಸುರಿದ ಮಳೆಯಿಂದ ಜಿಲ್ಲೆಯ ಅಳ್ನಾವರದ ಹುಲಿಕೆರೆ ಬಸಿದು ಅಪಾರ ಪ್ರಮಾಣದ ನೀರು ಸೋರಿಕೆಯಾದ ಹಿನ್ನೆಲೆ ಟಿಳಕ ನಗರ ಜಲಾವೃತಗೊಂಡಿದೆ. ಆ ಪ್ರದೇಶದಲ್ಲಿ ವಾಸವಿದ್ದ ವಿಕಲಚೇತನ ಮಹಿಳೆ ಮನೆಯಿಂದ ಹೊರ ಬರಲಾಗದೆ ಪರದಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿದ್ದಾರೆ.
ಧಾರವಾಡದಲ್ಲಿ ಭಾರಿ ಮಳೆಗೆ ಜನತೆ ಹೈರಾಣ ಟಿಳಕ ನಗರದ ಬಸಮ್ಮ ಎರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಭಾರಿ ಮಳೆಯಿಂದಾಗಿ ಆ ಮನೆಯೂ ಜಲಾವೃತವಾಗಿತ್ತು. ಈ ಹಿನ್ನೆಲೆ ಸ್ಥಳೀಯರು ಆಕೆಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಇದನ್ನೂ ಓದಿ: ಕರ್ತವ್ಯ ಪ್ರಜ್ಞೆಗೊಂದು ಸಲಾಂ: ಪುಟ್ಟ ಮಗುವಿನೊಂದಿಗೆ ಅಪಾಯದ ಸೇತುವೆ ದಾಟಿದ ಶಿಕ್ಷಕಿ
ಆನ್ಲೈನ್ ಕ್ಲಾಸ್‌ಗೂ ಮಳೆರಾಯನ ಅಡ್ಡಿ..!
ಧಾರವಾಡ ಜಿಲ್ಲೆಯಲ್ಲಿ ಮಳೆರಾಯನ ಅಬ್ಬರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮನೆಗಳ ಗೋಡೆಗಳ ಮೇಲೆ ನೀರು ಬರುತ್ತಿದ್ದು, ಜನರು ಭಯದಲ್ಲಿಯೇ ಮನೆಯಲ್ಲಿದ್ದಾರೆ. ಮಕ್ಕಳ ಆನ್ಲೈನ್ ಕ್ಲಾಸ್‌ಗೂ ಮಳೆರಾಯ ಅಡ್ಡಿಯನ್ನುಂಟು ಮಾಡಿದ್ದಾನೆ. ಭಾರಿ ಮಳೆ ಹಿನ್ನೆಲೆ ನೆಟ್ವರ್ಕ್ ಸಿಗದೆ ಮಕ್ಕಳು ಪಾಠ ಕೇಳಲು ಸಾಧ್ಯವಾಗುತ್ತಿಲ್ಲ. ಮನೆಗಳಿಗೆ ನುಗ್ಗಿರುವ ನೀರನ್ನು ಹೊರ ಹಾಕುವುದೇ ದೊಡ್ಡ ಸವಾಲಾಗಿದೆ ಎಂದು ಮಕ್ಕಳು ಅಳಲು ತೋಡಿಕೊಂಡಿದ್ದಾರೆ.
ಇದೇ ರೀತಿ ಮುಂದುವರಿದರೆ, ಜೀವನ ನಡೆಸೋದು ಹೇಗೆ? ಜಿಲ್ಲಾಡಳಿತ ನಮ್ಮ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ನಿರಾಶ್ರಿತರ ಕೇಂದ್ರ ತೆರೆದು ನಮಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.