ಧಾರವಾಡ:ಗಣೇಶ ಹಬ್ಬದ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಿರ್ವಹಿಸದೆ ಮನೆಗೆ ಹೋಗಿ ಮಲಗಿದ್ದ ಪಿಎಸ್ಐನನ್ನು ಕರ್ತವ್ಯಲೋಪದ ಮೇಲೆ ಧಾರವಾಡ ಎಸ್ ಪಿ ವರ್ತಿಕಾ ಕಟಿಯಾರ್ ಅಮಾನತುಗೊಳಿಸಿದ್ದಾರೆ.
ಪಿಎಸ್ಐ ಅಮಾನತುಗೊಳಿಸಿ ಅದೇಶ ಹೊರಡಿಸಿದ ಎಸ್.ಪಿ. ವರ್ತಿಕಾ ಕಟಿಯಾರ್ ಧಾರವಾಡ ಜಿಲ್ಲೆಯ ಗರಗ ಠಾಣೆ ಪಿಎಸ್ಐ ಸಮೀರ ಮುಲ್ಲಾ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಗರಗ ಠಾಣೆ ವ್ಯಾಪ್ತಿಯ ಕೋಟೂರ ಗ್ರಾಮದಲ್ಲಿ ಗಣೇಶ ಪ್ರತಿಷ್ಠಾಪನೆಯ ದಿನ ಮೆರವಣಿಗೆ ಸಾಗುವಾಗ ಸ್ವಲ್ಪ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಇದು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ, ಮಧ್ಯರಾತ್ರಿ 2 ಗಂಟೆಗೆ ಖುದ್ದು ಜಿಲ್ಲಾ ಎಸ್ಪಿ ವರ್ತಿಕಾ ಕಟಿಯಾರ್ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಪಿಎಸ್ಐ ಸಮೀರ ಮುಲ್ಲಾ ಇರಲಿಲ್ಲ. ಆ ಕ್ಷಣವೇ ಸ್ಥಳಕ್ಕೆ ಕರೆಸಿ ರಾತ್ರಿಯಿಡೀ ಗಸ್ತು ನಿರ್ವಹಿಸುವಂತೆ ಸೂಚಿಸಿದ್ದರು.
ಆದರೆ ನಸುಕಿನ ಜಾವ 4ಕ್ಕೆ ಪುನಃ ಎಸ್.ಪಿ. ಅದೇ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಪಿಎಸ್ಐ ಮುಲ್ಲಾ ಗಸ್ತು ನಿರ್ವಹಿಸದೇ ಮನೆಗೆ ಹೋಗಿದ್ದು ಗಮನಕ್ಕೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ವರ್ತಿಕಾ ಕಟಿಯಾರ ಕರ್ತವ್ಯಲೋಪದ ಹಿನ್ನೆಲೆ ಸಮೀರ ಮುಲ್ಲಾನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.