ಹುಬ್ಬಳ್ಳಿ: ಇಷ್ಟು ದಿನ ಆನ್ಲೈನ್ ಮಾರ್ಕೆಟ್ ಹಾಗೂ ಬ್ಯಾಂಕ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಸೈಬರ್ ವಂಚಕರು ಈಗ ಮತ್ತೊಂದು ದಾರಿ ಹಿಡಿದಿದ್ದಾರೆ. ಕೇಂದ್ರ ಸರ್ಕಾರದ ಯೋಜನೆ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಬೇರು ಬಿಟ್ಟಿದ್ದು, ಸ್ವಲ್ಪ ಯಾಮಾರಿದರೂ ನಿಮ್ಮ ಜೇಬಿಗೆ ಕತ್ತರಿ ಬೀಳುವುದಂತೂ ಖಂಡಿತ.
ಕೇಂದ್ರ ಸರ್ಕಾರದ ಇಂಧನ ಮತ್ತು ಪುನರ್‌ಬಳಕೆ ಮಾಡಬಹುದಾದ ಇಂಧನ (ಪವರ್ ಎಂಡ್ ರಿನಿವೇಬಲ್ ಎನರ್ಜಿ) ಇಲಾಖೆ ಯೋಜನೆ ಹೆಸರಿನಲ್ಲಿ 'ಸೋಲಾರ್ ಪ್ಯಾನಲ್ ಚೈನ್ ಲಿಂಕ್' ಎಂಬ ನಕಲಿ ಯೋಜನೆ ಸೃಷ್ಟಿಸಿ ವೆಬ್‌ಸೈಟ್ ಮೂಲಕ 3.38 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೆಚ್ಚಾಗಿ ಹುಬ್ಬಳ್ಳಿ ವ್ಯಕ್ತಿಗಳು ವಂಚಕರ ಜಾಲಕ್ಕೆ ಬಿದ್ದಿದ್ದು, 3.38 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿ ವಾಟ್ಸ್ಆ್ಯಪ್ ಮೂಲಕ ಪರಿಚಿತನಾಗಿದ್ದಾನೆ. ನಂತರ accecard.com/m ಎಂಬ ವೆಬ್‌ಸೈಟ್‌ನ್ನು ಸಂಪರ್ಕಿಸಲು ತಿಳಿಸಿದ್ದಾನೆ. ವೆಬ್‌ಸೈಟ್ ನೋಡಿದ ದೂರುದಾರನಿಗೆ Ministry of Power Minister New and Renewable ಮೂಲಕ ಪ್ರಧಾನಿಯರ ಭಾವಚಿತ್ರವಿರುವ ಜಾಹೀರಾತು ಕಂಡುಬಂದಿದೆ. ಅಷ್ಟೇ ಅಲ್ಲದೆ, ವಿವಿಧ ಹೂಡಿಕೆಗಳ ಸ್ಕೀಂಗಳ ಬಗ್ಗೆ ಉಲ್ಲೇಖವೂ ಕಂಡುಬಂದಿತ್ತು. ಈ ಸ್ಕೀಂಗಳಲ್ಲಿ ಹಣ ಹೂಡಿದರೆ ಪ್ರತಿದಿನ ನಿಶ್ಚಿತ ಲಾಭ ಹಾಗೂ ವೇತನ ನೀಡುವುದಾಗಿ ಹೇಳಿ ವಂಚಕರು ನಂಬಿಸಿದ್ದಾರೆ. ಅದರಂತೆ 1,516 ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ. ಮೊದ ಮೊದಲು ರಿಟರ್ನ್ ಕೊಟ್ಟಂತೆ ಮಾಡಿ ವಿಶ್ವಾಸ ಮೂಡಿಸಿದ್ದಾರೆ. ಇದರಿಂದ ಪ್ರೇರಿತನಾದ ದೂರುದಾರ ತನಗೆ ಪರಿಚಯಸ್ಥರಿಂದಲೂ ಸಹ ವಿವಿಧ ಸೋಲಾರ್ ಪ್ಯಾನಲ್ ಪ್ಲಾನ್‌ಗಳಲ್ಲಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿದ್ದು, ಹೀಗೆ ಒಟ್ಟು 3,38,936 ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.