ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕಳಸ - ಬಂಡೂರಿ ಹೋರಾಟ ಸಮಿತಿ ಮುಖಂಡರು ಬೆಂಬಲ ನೀಡಿದ್ದಾರೆ.
ದೆಹಲಿ ರೈತರ ಅಹೋರಾತ್ರಿ ಧರಣಿಗೆ ಕಳಸ-ಬಂಡೂರಿ ಹೋರಾಟಗಾರರ ಬೆಂಬಲ
ಕೇಂದ್ರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ಅನ್ನದಾತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಕರ್ನಾಟಕದ ಕಳಸ - ಬಂಡೂರಿ ಹೋರಾಟ ಸಮಿತಿ ಮುಖಂಡರು ಬೆಂಬಲ ನೀಡಿದ್ದಾರೆ.
ಡಿಸೆಂಬರ್ 19ರಂದು ಬಾಬಾಜಾನ್ ಮುಧೋಳ ಹಾಗೂ ರಾಜಶೇಖರ ಮೆಣಸಿಕಾಯಿ ನೇತೃತ್ವದ ತಂಡ ದೆಹಲಿ ಹೋರಾಟದಲ್ಲಿ ಭಾಗವಹಿಸಿತ್ತು. ಅಲ್ಲದೆ ರೈತ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿದರು. ಒಂದು ವೇಳೆ ಕಾನೂನು ಹಿಂಪಡೆಯದಿದ್ದರೆ ರೈತರು ಕೇಂದ್ರ ಸರ್ಕಾರದ ವಿರುದ್ಧ ದಂಗೆ ಏಳಲಿದ್ದಾರೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಕಳೆದ 24 ದಿನಗಳಿಂದ ಪ್ರತಿಭಟನಾನಿರತ ರೈತರಿಗೆ ನಿತ್ಯ ದಾಸೋಹ ಏರ್ಪಡಿಸಿದ್ದು, ಇದರಲ್ಲಿ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.