ಹುಬ್ಬಳ್ಳಿ/ಧಾರವಾಡ:ಜನಸಂಖ್ಯಾ ನಿಯಂತ್ರಣದಲ್ಲಿ ಕುಟುಂಬ ಯೋಜನೆಯು ಮಹತ್ವದ ಪಾತ್ರ ವಹಿಸುತ್ತಿದ್ದು, ಇದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಕೊರೊನಾ ಕುಟುಂಬ ಯೋಜನೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದ್ದು, ಸೋಂಕು ಕಾಲಿಟ್ಟ ಬಳಿಕ ಸಂತಾನ ಹರಣ ಶಸ್ತ್ರ ಚಿಕಿತ್ಸೆಯು ಸ್ಥಗಿತಗೊಂಡಿತ್ತು.
ಕೋವಿಡ್ ನಂತರದ ರಾಜ್ಯದಲ್ಲಿ ಅನೇಕ ಮಹಿಳೆಯರು ತಮಗೆ ಮಕ್ಕಳು ಬೇಡ, ಆಪರೇಷನ್ ಮಾಡಿ ಎಂದರೂ ಶಸ್ತ್ರ ಚಿಕಿತ್ಸೆ ನಡೆದಿರಲಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಈ ಸೇವೆಯನ್ನೂ ನಿಲ್ಲಿಸಲಾಗಿತ್ತು. ಜೊತೆಗೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿಗೆ ಹಣ ಸುಲಿಗೆ ಮಾಡುತ್ತಿದ್ದರಿಂದ ಸಂಪೂರ್ಣವಾಗಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆದಿರಲಿಲ್ಲ.
ಮತ್ತೆ ಶುರುವಾದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸೋಂಕಿನ ಹರಡುವ ಭೀತಿ ಹಿನ್ನೆಲೆ ಶಸ್ತ್ರ ಚಿಕಿತ್ಸೆ ಮಾಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಆದ್ದರಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆಯು ಸಂಪೂರ್ಣವಾಗಿ ಕುಂಠಿತಗೊಂಡಿತ್ತು. ಇದೀಗ ಮತ್ತೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗುತ್ತಿದ್ದು, ಮೊದಲಿಗಿಂತಲೂ ಹೆಚ್ಚು ಜನರು ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದಾರೆ.
ಕೊರೊನಾ ಪೂರ್ವದಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪ್ರತಿ ತಿಂಗಳು, ಸುಮಾರು 150 ಮಹಿಳೆಯರು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದರು. ಆದರೆ ಈಗ ಅದರ ಪ್ರಮಾಣ ಹೆಚ್ಚಾಗಿದ್ದು, ಕೊರೊನಾ ಭೀತಿ ಕಡಿಮೆಯಾದ್ದರಿಂದ ಅತೀ ಹೆಚ್ಚು ಜನರು ಚಿಕಿತ್ಸೆಯತ್ತ ಒಲವು ತೋರುತ್ತಿದ್ದಾರೆ. ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಒಂದರಲ್ಲಿಯೇ ಪ್ರತಿ ತಿಂಗಳು 150ಕ್ಕೂ ಹೆಚ್ಚು ಮಹಿಳೆಯರು ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.
ಕೊರೊನಾ ಕಾಲಿಟ್ಟ ಬಳಿಕ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕ್ಯಾಂಪ್‌ಗಳು ಬಂದ್ ಆಗಿದ್ದರಿಂದ, ಕೆಲವರು ಕಾಂಡೋಮ್, ಗರ್ಭ ನಿರೋಧಕ ಮಾತ್ರೆಗಳ ಮೊರೆ ಹೋಗುತ್ತಿದ್ದರು. ಆದರೆ ಇದೀಗ ಮೊದಲಿನ ರೀತಿಯಲ್ಲಿ ಎಲ್ಲವೂ ಬದಲಾಗುತ್ತಿದ್ದು, ಇತ್ತ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿವೆ. ಆದ್ದರಿಂದ ಜನರು ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಮೊದಲಿನಂತೆ ಮಾಡಿಸಿಕೊಳ್ಳುತ್ತಿದ್ದಾರೆ.