ಜರ್ಮನಿಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಬೇಕಿದೆ ಸರ್ಕಾರದ ನೆರವಿನ ಹಸ್ತ ಹುಬ್ಬಳ್ಳಿ :ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಲಿರುವ ವಿಶ್ವ ಕುಬ್ಜರ (ಡ್ವಾರ್ಪ) ಕ್ರೀಡಾಕೂಟಕ್ಕೆ ಹೋಗಲು ಆರ್ಥಿಕ ಸಮಸ್ಯೆ ಎದುರಾಗಿ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ಕುಬ್ಜ ಕ್ರೀಡಾಪಟು ಪರದಾಟ ನಡೆಸುತ್ತಿದ್ದಾರೆ. ದೇವಪ್ಪ ಮೋರೆ (50) ಸಂಕಷ್ಟದಲ್ಲಿರುವ ಸಾಧಕ. ಜುಲೈ 28 ರಿಂದ ಆಗಸ್ಟ್ 5ರ ವರೆಗೆ ಜರ್ಮನ್ನಲ್ಲಿ ನಡೆಯಲಿರುವ ವಿಶ್ವ ಕುಬ್ಜರ ಅಥ್ಲೆಟಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಸರ್ಕಾರದಿಂದ ಹಣಕಾಸಿನ ನೆರವು ಸಿಗದೆ ಕಂಗಾಲಾಗಿದ್ದಾರೆ.
ಬಡ ರೈತ ಕುಟುಂಬದಲ್ಲಿ ಜನಿಸಿದ ದೇವಪ್ಪ ಮೋರೆಯವರು ಬಾಲ್ಯದಲ್ಲಿಯೇ ಹಾರ್ಮೋನುಗಳ ಏರುಪೇರನಿಂದ ಕುಬ್ಜರಾಗಿ ಬೆಳೆದರೂ ತಮ್ಮ ಸಾಧನೆಯಲ್ಲಿ ಆಕಾಶದೆತ್ತರಕ್ಕೆ ಬೆಳೆದಿದ್ದಾರೆ. ಹಲವಾರು ರಾಷ್ಟ್ರಗಳಲ್ಲಿ ನಡೆಯುವ ಕುಬ್ಜರ ಅಥ್ಲೆಟಿಕ್ಸ್ನಲ್ಲಿ 100, 200, 50 ಮೀಟರ್ ಓಟದಲ್ಲಿ ಚಿನ್ನ, ಬೆಳ್ಳಿ, ಕಂಚನ್ನು ಗೆಲ್ಲುವ ಮೂಲಕ ಸಾಧನೆ ಮಾಡಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಅಮೆರಿಕ, ಕೆನಡಾದಲ್ಲಿ ನಡೆದಿರುವ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ, ಕಂಚನ್ನು ಕೊರಳಿಗೆ ಹಾಕಿಕೊಂಡಿರುವ ದೇವಪ್ಪ ಮತ್ತಷ್ಟು ಪದಕಗಳ ಬೇಟೆಗೆ ಸನ್ನದ್ಧರಾಗಿದ್ದಾರೆ. ಆದರೇ ಹಣವಿಲ್ಲದೆ ಬಡ್ಡಿಯಲ್ಲಿ ಸಾಲ ಮಾಡಿಯೇ ಸ್ವಂತ ಹಣದಲ್ಲಿ ಸಾಧನೆ ಮಾಡುವಂತಾಗಿದ್ದು ಎಷ್ಟೇ ಸಾಧನೆ ಮಾಡಿದರು ಇನ್ನು ಕೂಡ ಬಡತನದಲ್ಲಿಯೇ ಜೀವನ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯ ಶಿವಾನಂದ ಗುಂಜಾಳ ತರಬೇತುದಾರರು ಹಾಗೂ ವ್ಯವಸ್ಥಾಪಕರಾಗಿರುವ ರಾಷ್ಟ್ರೀಯ ಕುಬ್ಜರ ತಂಡ ಜುಲೈ 26 ರಂದು ಬೆಳಗ್ಗೆ ಜರ್ಮನಿಗೆ ಹಾರಲಿದ್ದು, ಇತ್ತೀಚೆಗೆ ಸ್ವತಃ ರಾಜ್ಯಪಾಲ ಥಾವರ್‌ಚಂದ ಗೆಹ್ಲೊಟ್ ರಾಜಭವನದಲ್ಲಿ ತಂಡಕ್ಕೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ. ಕ್ರೀಡೆ ಸಹಿತ ಇತರ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಹಣವನ್ನು ವ್ಯಯಿಸುತ್ತಿದ್ದರೂ ಇಂತಹ ಸಾಧಕರು ಮಾತ್ರ ಕಣ್ಣಿಗೆ ಬೀಳುತ್ತಿಲ್ಲ. ಚೆನ್ನೈನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ 50, 100, 200 ಮೀ. ಓಟಕ್ಕೆ ದೇವಪ್ಪ ಮೋರೆ ಆಯ್ಕೆಯಾಗಿದ್ದು, ಪಾಲ್ಗೊಳ್ಳಲಿರುವ ತಂಡದಲ್ಲಿ 8ಜನರು ಕನ್ನಡಿಗರೇ ಆಗಿರುವುದು ಮತ್ತೊಂದು ವಿಶೇಷ.
ದೇಶ ಪ್ರತಿನಿಧಿಸುತ್ತಿದ್ದರೂ ಕೇಂದ್ರ ಸರ್ಕಾರದಿಂದ ಬಿಡಿಗಾಸಿನ ಅನುದಾನವೂ ಬಂದಿಲ್ಲ. ಹೀಗಾಗಿ ಪ್ರವಾಸದ ವೆಚ್ಚ ತಾವೇ ಭರಿಸಿಕೊಳ್ಳಲು ಸೂಚಿಸಿದ್ದು ಈಗಾಗಲೇ 1.50 ಲಕ್ಷ ರೂ. ಗಳನ್ನು ಸಾಲ ಮಾಡಿ ಪ್ರವೇಶ ಶುಲ್ಕ ಭರಿಸಿದ್ದಾರೆ. ಈ ಬಾರಿ ಮುಂಗಾರು ಆಗದೆ ಕೃಷಿಯೂ ಕೈ ಕೊಟ್ಟಿದ್ದರಿಂದ ಕಷ್ಟದಲ್ಲೇ ಕೈ ತೊಳೆಯುತ್ತಿರುವ ಇವರಿಗೆ ಕುಟುಂಬಸ್ಥರು ಮಾತ್ರ ಆಸರೆಯಾಗಿ ನಿಂತಿದ್ದಾರೆ. ಇದೀಗ ದೇವಪ್ಪ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮಿಂಚು ಹರಿಸಲು ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳು ನೆರವಿಗೆ ಬಂದಿವೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೂ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಆದರೇ ಬೇರೆ ರಾಜ್ಯಗಳು ಇಂತ ಪ್ರತಿಭೆಗಳಿಗೆ ಕೊಡುವ ಸಹಾಯ ಸಹಕಾರ ಮಾತ್ರ ನಮ್ಮ ರಾಜ್ಯದಲ್ಲಿ ಸಿಗುತ್ತಿಲ್ಲ ಎಂದು ತರಬೇತುದಾರರಾದ ಗುಂಜಾಳ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ :ಏಷ್ಯನ್ ಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಲಾಂಗ್ ಜಂಪರ್ ಶ್ರೀಶಂಕರ್: 2024ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಆಟಗಾರ