ಹುಬ್ಬಳ್ಳಿ: ಸಣ್ಣದೊಂದು ಅಂಗವೈಕಲ್ಯ ಇಡೀ ಜೀವನವನ್ನೇ ಅಂಧಕಾರಕ್ಕೆ ತಳ್ಳಿ ಬಿಡುತ್ತದೆ. ಆದ್ರೆ ಹುಬ್ಬಳ್ಳಿಯ ಹುಡುಗನೊಬ್ಬ ತನ್ನ ಜೀವನದಲ್ಲಾದ ಒಂದು ಅವಘಡದಿಂದ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಮೈಕೊಡವಿ ಮೇಲೆದ್ದು ಬಂದ. ಅಂಗವೈಕಲ್ಯ ಇದ್ದವರು ಕೂಡಾ ಏನು ಬೇಕಾದ್ರೂ ಸಾಧಿಸಬಹುದು ಎಂಬುದನ್ನು ನಿರೂಪಿಸಿ, ಸಾಧಿಸಿ ತೋರಿಸುತ್ತಿದ್ದಾನೆ.
26 ಬಾರಿ ಶಸ್ತ್ರಚಿಕಿತ್ಸೆ: ಈ ಬಾಲಕ ವಾಣಿಜ್ಯನಗರಿ ಹುಬ್ಬಳ್ಳಿಯ ನಿವಾಸಿ ಮಂಜುನಾಥ ಬಳ್ಳಾರಿ ಎಂಬುವವರ ಪುತ್ರ. ಹೆಸರು ಸಿದ್ಧಾರ್ಥ ಬಳ್ಳಾರಿ. ಸಾಧನೆ ಮಾಡಬೇಕು ಅಂದರೆ ಅದಕ್ಕೆ ಸಾಧಿಸುವ ಛಲವೊಂದಿದ್ದರೆ ಸಾಕು, ಎಂತಹದ್ದೇ ಸಮಸ್ಯೆ ಎದುರಾದರೂ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ಸಾಧಕ ಈತ.
ಅಂಗವೈಕಲ್ಯ ಮೆಟ್ಟಿ ನಿಂತು ಸಾಧನೆಯ ಶಿಖರದತ್ತ ಹುಬ್ಬಳ್ಳಿ ಹೈದನ ದಿಟ್ಟ ಹೆಜ್ಜೆ 26 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ಈತನ ದೇಹದಲ್ಲಿ ಸುಮಾರು 6,500ಕ್ಕೂ ಅಧಿಕ ಹೊಲಿಗೆಗಳಿವೆ. ಆದರೂ ಛಲ ಬಿಡದೆ ಅಂತರರಾಷ್ಟ್ರೀಯ ಐಎಸ್ಎಫ್ ಕ್ರೀಡಾಕೂಟಕ್ಕೆ ಆಯ್ಕೆಯಾದ್ದಾನೆ. ಇದೀಗ ದೇಶವನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಿದ್ದಾನೆ.
ರಾಜ್ಯ, ರಾಷ್ಟ್ರೀಯ ಮಟ್ಟದ ಪ್ಯಾರಾ ಕ್ರೀಡಾಕೂಟಗಳಲ್ಲಿ ಹಲವು ಪದಕಗಳನ್ನು ಗೆದ್ದಿರುವ ಸಿದ್ದಾರ್ಥ ಬಳ್ಳಾರಿ, ಶಾಂತಿನಿಕೇತನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾನೆ. ಸದ್ಯ 18 ವರ್ಷದೊಳಗಿನ ಕ್ರೀಡಾಪಟುಗಳ ಟೂರ್ನಿಯಲ್ಲಿ ಭಾಗಿಯಾಗಲು 19ನೇ ಅಂತರರಾಷ್ಟ್ರೀಯ ಸ್ಪೋರ್ಟ್ಸ್ ಫೆಡರೇಷನ್ (ಐಎಸ್‌ಎಫ್) ಆಯೋಜಿಸಿರುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ. ಈ ಕ್ರೀಡಾಕೂಟ ಮೇ 14ರಿಂದ ಫ್ರಾನ್ಸ್‌ನಲ್ಲಿ ಆಯೋಜನೆಯಾಗಿದೆ.
ಬದುಕು ಬದಲಿಸಿದ ದುರ್ಘಟನೆ: ಎರಡೂವರೆ ವರ್ಷಗಳ ಹಿಂದೆ ನಡೆದ ವಿದ್ಯುತ್ ಅವಘಡದಲ್ಲಿ ಸಿದ್ದಾರ್ಥ್‌ಗೆ 11 ಸಾವಿರ ಕೆ.ವಿ. ವೋಲ್ವೇಜ್‌ನ ವಿದ್ಯುತ್ ತಂತಿ ತಗುಲಿ ಹೊಟ್ಟೆಯ ಕೆಳಭಾಗವೆಲ್ಲ ಸುಟ್ಟು ಹೋಗಿತ್ತು. ತೊಡೆಯ ಭಾಗದ ಮಾಂಸ ಛಿದ್ರವಾಗಿತ್ತು. ಈಗಲೂ ಎಡಗೈಇಲ್ಲ. ಇದನ್ನೆಲ್ಲ ಸರಿಪಡಿಸಲು 26 ಬಾರಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಷ್ಟೆಲ್ಲಾ ಆದರೂ ಯಾವುದಕ್ಕೂ ಅಂಜದೆ ಸಾಧನೆಯ ಶಿಖರದ ಕಡೆ ಮಾತ್ರ ಈತನ ಗಮನ ಕೇಂದ್ರೀಕೃತವಾಗಿದೆ.
ಸಾಧನೆಯೇ ಉಸಿರು:ಅನಾಹುತಕ್ಕೂ ಮೊದಲುಹಾಕಿ ಆಟಗಾರನಾಗಿದ್ದ ಸಿದ್ಧಾರ್ಥ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲೇಬೇಕು ಎಂದು ಕನಸು ಕಟ್ಟಿಕೊಂಡಿದ್ದ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಇದನ್ನೇ ಸವಾಲೆಂದು ಸ್ವೀಕರಿಸಿ ದಿನವೂ ಕಠಿಣ ಪರಿಶ್ರಮ ಹಾಕಿ ತನ್ನ ಶಸ್ತ್ರಚಿಕಿತ್ಸೆಗಿಂತ ಹೆಚ್ಚು ಪದಕಗಳನ್ನು ಈತ ಮುಡಿಗೇರಿಸಿಕೊಂಡ. ಈ ಎಲ್ಲಾ ಸವಾಲುಗಳ ನಡುವೆ ಅರಳಿನಿಂತ ಸಿದ್ದಾರ್ಥ್ ಬಳ್ಳಾರಿ ಐಎಸ್‌ಎಫ್ ಕ್ರೀಡಾಕೂಟದಲ್ಲಿ 100 ಮೀಟರ್, 400 ಮೀ. ಓಟದ ಸ್ಪರ್ಧೆ ಮತ್ತು ಲಾಂಗ್‌ಜಂಪ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾನೆ. ತಂಡದ ಆಯ್ಕೆಗಾಗಿ ಭುವನೇಶ್ವರದಲ್ಲಿ ಈಚೆಗೆ ಭಾರತ ಸ್ಕೂಲ್ ಗೇಮ್ಸ್ ಫೆಡರೇಷನ್ (ಎಸ್‌ಜಿಎಫ್‌ಐ) ಆಯೋಜಿಸಿದ್ದ ಅಯ್ಕೆ ಟ್ರಯಲ್ಸ್‌ನಲ್ಲಿ ಅರ್ಹತೆ ಪಡೆದಿದ್ದಾನೆ.
ಇಂತಹದ್ದೊಂದು ಪ್ರತಿಭೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬರುತ್ತಿರುವುದು ವಾಣಿಜ್ಯನಗರಿಯ ಹೆಮ್ಮೆ. ಇಂತಹ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಹಾಗೂ ಸರ್ಕಾರ ಧನಸಹಾಯ ಮಾಡುವ ಮೂಲಕ ಮತ್ತಷ್ಟು ಸಾಧನೆಗೆ ಬೆಂಬಲ ನೀಡಬೇಕಿದೆ. ಈ ಸಾಧಕ ಬಾಲಕನಿಗೆ ಸಹಾಯ ನೀಡಲಿಚ್ಛಿಸುವವರು ಈ ಕೆಳಗಿನ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಸಂಪರ್ಕ ಸಂಖ್ಯೆ: 8105419871, 9606005516.