ಧಾರವಾಡ :ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದು ಕೆರೆ, ಹೊಳೆ, ತೊರೆಗಳಲ್ಲಿ ನೀರು ತುಂಬಿ ಹರಿಯುತ್ತಿರೋದ್ರಿಂದಾಗಿ ರೈತರು ಕೃಷಿ ಚಟುವಟಿಕೆಗಳಲ್ಲಿ ಖುಷಿಯಿಂದಲೇ ತೊಡಗಿಕೊಂಡಿದ್ದಾರೆ. ಮಳೆ ಬಿದ್ದು ಮಣ್ಣು ತೇವವಾಗುತ್ತಿದ್ದಂತೆಯೇ ರೈತರು ಭತ್ತ ಬೆಳೆಯಲು ಆರಂಭಿಸಿದ್ದಾರೆ.
ಭತ್ತದ ಬೆಳೆಯಿಂದ ನಿರೀಕ್ಷಿಸಿದಂತೆ ಆದಾಯ ಬರಲ್ಲ ಎಂಬ ಸತ್ಯ ಗೊತ್ತಿದ್ದರೂ ನಷ್ಟದಲ್ಲಿಯೇ ರೈತರು ಭತ್ತ ಬೆಳೆಯಲು ಮುಂದಾಗಿದ್ದಾರೆ. ಕಾರಣ ಅದರ ಮೇಲೆ ಇರುವ ಭಾವನಾತ್ಮಕ ಸಂಬಂಧ. ಧಾನ್ಯಲಕ್ಷ್ಮಿ ಮನೆಯಲ್ಲಿರಬೇಕೆಂಬ ಕಾರಣಕ್ಕಾಗಿ ಮತ್ತು ತಮ್ಮ ಅಗತ್ಯಕ್ಕೆ ತಕ್ಕಷ್ಟು ಗದ್ದೆ ಉಳಿಸಿಕೊಂಡು ರೈತರು ಕೃಷಿ ಮಾಡುತ್ತಿದ್ದಾರೆ.
ಮೊದಲಿಗೆ ಹೋಲಿಸಿದರೆ ಭತ್ತದ ಗದ್ದೆ ಬಯಲಿನ ವಿಸ್ತೀರ್ಣವೂ ಕಡಿಮೆಯಾಗುತ್ತಿದೆ. ತೋಟ, ನಿವೇಶನಗಳಾಗಿ ಮಾರ್ಪಾಡುಗೊಂಡಿವೆ. ಕೆಲವು ವರ್ಷಗಳ ಹಿಂದೆ ಮುಂಗಾರು ಮಳೆಯೂ ಸಮರ್ಪಕವಾಗಿ ಸುರಿದಿರಲಿಲ್ಲ. ಹೀಗಾಗಿ ಗದ್ದೆಗಳಿಗೆ ಸಮರ್ಪಕ ನೀರಿಲ್ಲದೆ ಬಹಳಷ್ಟು ಬೆಳೆಗಾರರು ಭತ್ತ ಮರೆತೇಬಿಟ್ಟಿದ್ದರು. ಜತೆಗೆ ಭತ್ತ ಬೆಳೆಯುವುದರಿಂದ ನಷ್ಟವೂ ಹೆಚ್ಚಾಗುತ್ತಿರುವುದರಿಂದ ಅದರತ್ತ ನಿರಾಸಕ್ತಿ ತೋರಿದ್ದರು. ಹೀಗಾಗಿ ಬಹಳಷ್ಟು ಗದ್ದೆಯ ಬಯಲುಗಳು ಪಾಳುಬಿದ್ದಿವೆ.
ಈ ವರ್ಷ ಕೊರೊನಾದಿಂದ ಸಾಕಷ್ಟು ಮಂದಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಕೆರೆ, ಹೊಳೆ ದಡದಲ್ಲಿರುವ ಗದ್ದೆಗಳಿಗೆ ಪ್ರವಾಹದ ಭಯವೂ ಕಾಡುತ್ತಿದೆ.