ಧಾರವಾಡ:ಕ್ರಿಕೆಟ್ ಆಟವಾಡಲು ಹೋಗಿ ವಿದ್ಯುತ್ ತಂತಿ ತಗುಲಿದ ಪರಿಣಾಮ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳವನ್ನು ಇಂದು ಕೆಇಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ನಂತರ ಹೆಸ್ಕಾಂ ಸೆಕ್ಷನ್ ಆಫೀಸರ್ ಗೋವಿಂದ ಅವರು ಮೃತ ಬಾಲಕ, ಗಾಯಗೊಂಡಿರುವ ಬಾಲಕನ ಮನೆಗಳಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಧಾರವಾಡದ ಮದಿಹಾಳದ ಕಾಲೋನಿಯಲ್ಲಿ ವಿದ್ಯುತ್ ತಂತಿ ತಗುಲಿ, ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಶ್ರೆಯಸ್ ಸಿನ್ನೂರ್ (16) ನಿನ್ನೆ ಸಂಜೆ ಮೃತಪಟ್ಟಿದ್ದು, ಆತನನ್ನ ರಕ್ಷಿಸಲು ಹೋಗಿದ್ದ ಇನ್ನೊಬ್ಬ ಬಾಲಕನಿಗೆ ಸಹ ಸಣ್ಣಪುಟ್ಟ ಗಾಯಗಳಾಗಿದ್ದವು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಆತ ಪಾರಾಗಿದ್ದಾನೆ.
ಕುಟುಂಬದಲ್ಲಿ ಮುಗಿಲು ಮುಟ್ಟಿದ ಅಕ್ರಂದನ: ವಿದ್ಯುತ್ ತಂತಿ ತಗುಲಿದ ವೇಳೆ ಇಬ್ಬರು ಮೂರ್ಛೆ ಹೋಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶ್ರೇಯಸ್ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದ. ಇನ್ನೊಬ್ಬ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಆತ ಗುಣಮುಖವಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಈ ಘಟನೆಯಿಂದ ಶ್ರೇಯಸ್ ಹೆತ್ತವರು ಮತ್ತು ಕುಟುಂಬದವರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
'ಶ್ರೇಯಸ್ ನನಗೆ ಒಬ್ಬನೇ ಮಗ' ಗೋಳಾಡಿದ ತಂದೆ:ಮೃತ ಬಾಲಕ ಶ್ರೇಯಸ್ ತಂದೆ ಅಶೋಕ ಶಿನ್ನೂರ ಮಾತನಾಡಿ "ಸಂಜೆ 5ಕ್ಕೆ ಶಾಲೆಯಿಂದ ಬಂದು ಮನೆಯಲ್ಲಿ ಮೊಬೈಲ್ ಹಿಡಿದು ಕುಳಿತಿದ್ದ, ಆಗ ಆಟ ಆಡಲು ಗೆಳೆಯ ಕರೆದಿದ್ದರಿಂದ ಆತ ಹೊರಗೆ ಹೋಗಿದ್ದಾನೆ. ಇಬ್ಬರೂ ಪ್ರತಿದಿನ ಸಂಜೆ ಆಟ ಆಡುತ್ತಿದ್ದರು. ಚೆಂಡು ತೆಗೆದುಕೊಂಡು ಹೋಗಿದ್ದ ಆತ, ಹೋದ ಹತ್ತೇ ನಿಮಿಷದಲ್ಲಿ ನಿಮ್ಮ ಮಗ ಬಿದ್ದಿದ್ದಾನೆ ಎಂದು ಕರೆದರು" ಎಂದು ಘಟನೆ ಬಗ್ಗೆ ವಿವರಣೆ ನೀಡಿದರು.
"ಓಡಿ ಹೋಗಿ ನೋಡಿದಾಗ ವಿದ್ಯುತ್ ತಗುಲಿತ್ತು, ಮನೆ ಬಳಿ ಕಟ್ಟಡ ಕಾಮಗಾರಿ ನಡೆದಿರುವುದರಿಂದ ಈ ಘಟನೆ ನಡೆದಿದೆ. ಗೆಳೆಯ ಎಸೆದ ಬಾಲು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ. ಮಗ ಅಸ್ವಸ್ಥನಾಗಿದ್ದರಿಂದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ನಾನು ವೈದ್ಯರ ಕಾಲಿಗೂ ಬಿದ್ದು, ಮಗನನ್ನು ಉಳಿಸಿಕೊಡುವಂತೆ ಕೇಳಿದೆ. ಆದರೆ ಮಗ ಉಳಿಯಲಿಲ್ಲ. ಮಗ ನಗರದ ರಾಜೀವ್ ಗಾಂಧಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ. ಇನ್ನು ನನ್ನ ಮಗನನ್ನು ಉಳಿಸಲು ಮತ್ತೊಬ್ಬ ಬಾಲಕ ಭಾರಿ ಪ್ರಯತ್ನ ಪಟ್ಟಿದ್ದ, ಹೀಗಾಗಿ ಆತನಿಗೂ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೆವು ಎಂದು ಅವರು ಗೋಳಾಡಿದರು.
ಇದನ್ನೂಓದಿ:9 ತಿಂಗಳ ಮಗುವಿನ ಸಾವು ಸಹಜವಲ್ಲ ಕೊಲೆ: ಅತ್ತೆ ವಿರುದ್ಧ ಮಗುವಿನ ತಾಯಿ ದೂರು