ಧಾರವಾಡ :ರಾಜ್ಯ ಸರ್ಕಾರವು ಜನವರಿ 4ರಂದು ಹೊರಡಿಸಿರುವ ಆದೇಶದನ್ವಯ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 31 ನೋಂದಾಯಿತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿನಿಂದ ಶೇ.30ರಷ್ಟು ಹಾಗೂ ಜನವರಿ 10 ರಿಂದ ಶೇ.50ರಷ್ಟು ಬೆಡ್ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಡುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶಿಸಿದ್ದಾರೆ.
ಈ ಕುರಿತು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಆನ್ಲೈನ್ ವೆಬೆಕ್ಸ್ ಮೂಲಕ ಸಭೆ (ವಿಡಿಯೋ ಸಂವಾದ) ಜರುಗಿಸಿ ಮಾತನಾಡಿದರು. ಆಸ್ಪತ್ರೆಗಳು ಹೊಂದಿರುವ ಐಸಿಯು, ಹೆಚ್‍ಡಿಯು, ವೆಂಟಿಲೇಟರ್ ಮತ್ತು ಜನರಲ್ ಬೆಡ್‍ಗಳಲ್ಲಿ ನಾಳೆಯಿಂದ ಶೇ.30ರಷ್ಟು ಹಾಗೂ ಜನವರಿ 10ರಿಂದ ಶೇ.50ರಷ್ಟು ಕೋವಿಡ್ ಸೋಂಕಿತರ ಚಿಕಿತ್ಸೆ ಮತ್ತು ಆರೈಕೆಗಾಗಿ ಕಡ್ಡಾಯವಾಗಿ ಮೀಸಲಿಡಬೇಕು. ಈ ಕುರಿತು ಪರಿಶೀಲಿಸಲು ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡವನ್ನು ರಚಿಸಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ಮೊದಲ ಮತ್ತು 2ನೇ ಅಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಎಲ್ಲ ಆಸ್ಪತ್ರೆ ಹಾಗೂ ವೈದ್ಯಕೀಯ ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಾರೆ. ಈ 3ನೇ ಅಲೆ ಸಂದರ್ಭದಲ್ಲೂ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿ ಸಹಕಾರವನ್ನು ಜಿಲ್ಲಾಡಳಿತ ಬಯಸುತ್ತದೆ ಎಂದರು.