ಧಾರವಾಡ: ಇಲ್ಲಿನ ಮಹಾನಗರ ಪಾಲಿಕೆ ವಲಯ 2 ರ ವ್ಯಾಪ್ತಿಯಲ್ಲಿನ ರಾಯಲ್ ಕಮ್ಯುನಿಟಿ ಹಾಲ್‌ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅಧಿಕ ಜನರನ್ನು ಸೇರಿಸಿ ಮದುವೆ ಸಮಾರಂಭ ನಡೆಸುತ್ತಿದ್ದ ವೇಳೆ ಪೊಲೀಸ್, ಕಂದಾಯ ಇಲಾಖೆ ಹಾಗೂ ಮಹಾ ನಗರಪಾಲಿಕೆ ಅಧಿಕಾರಿಗಳು ಧಿಡೀರ್ ದಾಳಿ ನಡೆಸಿ ಅರ್ಜಿದಾರರು ಹಾಗೂ ಸಭಾಂಗಣದ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.
ಭೀಮಪ್ಪ ಜಿ.ಬಾಂಬೆ ಎಂಬುವರು ಏಪ್ರಿಲ್ 20 ರಂದು ಅರ್ಜಿ ಸಲ್ಲಿಸಿ, ಅಂದು ಜಾರಿಯಲ್ಲಿದ್ದ ನಿಯಮಗಳ ಪ್ರಕಾರ 100 ಜನ ಅತಿಥಿಗಳನ್ನು ಆಹ್ವಾನಿಸಲು ಅನುಮತಿ ಪಡೆದಿದ್ದರು.
ನಿನ್ನೆ ಏಪ್ರಿಲ್ 21 ರಿಂದ ಜಾರಿಗೊಂಡ ಹೊಸ ಮಾರ್ಗಸೂಚಿಗಳ ಪ್ರಕಾರ ಈ ಮಿತಿಯು 50ಕ್ಕೆ ಸೀಮಿತವಾಗಿದೆ.
ಇಂದು (ಏ.22) ರಂದು ಮಧ್ಯಾಹ್ನ ಧಾರವಾಡ ಶಹರ ಎಸಿಪಿ ಅನುಷಾ, ತಹಶೀಲ್ದಾರ್ ಡಾ.ಸಂತೋಷಕುಮಾರ್ ಬಿರಾದಾರ ಹಾಗೂ ಮಹಾನಗರಪಾಲಿಕೆ ಎರಡನೇ ವಲಯ ಅಧಿಕಾರಿ ಪಿಬಿಎಂ ಮಹೇಶ ಭೇಟಿ ನೀಡಿದಾಗ ಅಲ್ಲಿ 200 ಕ್ಕಿಂತ ಅಧಿಕ ಜನರು ಸೇರಿದ್ದು ಕಂಡು ಬಂದಿತು.