ಹುಬ್ಬಳ್ಳಿ:ಜಾನಪದ ಕಲೆಗಳು ಅನಕ್ಷರಸ್ಥರು ಮತ್ತು ಗ್ರಾಮೀಣರ ಕಲೆಗಳಾಗಿವೆ. ಆದರೆ, ಕೊರೊನಾದಿಂದಾಗಿ ಈ ಕಲಾವಿದರ ಬದುಕಿನಲ್ಲಿ ಕತ್ತಲೆಯ ಕಾರ್ಮೋಡ ಕವಿದಂತಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಅನೇಕ ಕಲೆಗಳು ಹುಟ್ಟುಕೊಂಡು ಬೆಳೆಯುತ್ತಾ ಸಾಗುತ್ತಿವೆ. ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಹುಬ್ಬಳ್ಳಿ ಕೋಟೇಶ್ ಹುಲ್ಲಿ 'ದಾಲಪಟ' ಸಂಘದ ಕಲಾವಿದರು ಮಾಡುತ್ತಾ ಬಂದಿದ್ದಾರೆ. ಆದರೆ ಕೊರೊನಾ ಸೋಂಕಿನಿಂದಾಗಿ ಆರು ತಿಂಗಳಿಂದ ಕಲಾವಿದರು ಜೀವನ ನಿರ್ವಹಣೆಗೆ ಸಂಕಷ್ಟ ಎದುರಾಗಿದೆ.
ಕಳೆದ 40 ವರ್ಷಗಳಿಂದ 15 ಜನ ಶ್ರೀ ಚಾಮುಂಡೇಶ್ವರಿ ದಾಲಪಟ ತಂಡ ಕಟ್ಟಿಕೊಂಡು, ದಾಲಪಟ ಕಲೆ, ಸಂಬಾಳ ವಾದ್ಯ, ಗೊಂಬೆ ಕುಣಿತ, ಕಾಳಿ ವಾದ್ಯ, ಸಮರ ಕಲೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನ, ಧಾರವಾಡ ಉತ್ಸವ, ಹಂಪಿ ಉತ್ಸವ, ಜಾತ್ರೆಗಳಲ್ಲಿ ಸಹ ಪ್ರದರ್ಶನ ನೀಡಿದ್ದಾರೆ.
ಇವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮಕ್ಕೆ ಆಮಂತ್ರಣ ನೀಡುತ್ತಿದ್ದರು. ಈಗ ಸರ್ಕಾರದ ನಿಯಮದ ಅಂಗವಾಗಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತಿಲ್ಲ. ಕಲೆಯನ್ನೇ ನಂಬಿದ ಬಡ ಕಲಾವಿದರಿಗೆ ದಿಕ್ಕು ತೋಚದಂತಾಗಿದೆ. ಹೀಗಾಗಿ, ಸರ್ಕಾರ ಸಮಾರಂಭಗಳನ್ನು ನಡೆಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.