ಕರ್ನಾಟಕ

karnataka

By

Published : May 6, 2023, 5:43 PM IST

Updated : May 6, 2023, 9:44 PM IST

ETV Bharat / state

ಬಿಜೆಪಿಯಿಂದ ಕರ್ನಾಟಕದ ಲೂಟಿ ತಡೆಯಲು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿ: ಸೋನಿಯಾ ಗಾಂಧಿ ಕರೆ

ಬಿಜೆಪಿಯವರು ಲೂಟಿಯನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ಸರ್ಕಾರ ಜನರನ್ನು ಲೂಟಿ ಮಾಡಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

Congress Leader Soniya Gandhi arrived in hubballi
ಬಿಜೆಪಿಯಿಂದ ಕರ್ನಾಟಕದ ಲೂಟಿ ತಡೆಯಲು ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸಿ: ಸೋನಿಯಾ ಗಾಂಧಿ ಕರೆ

ಹುಬ್ಬಳ್ಳಿಯ ಕಾಂಗ್ರೆಸ್​ ಪ್ರಚಾರ ಸಭೆ

ಹುಬ್ಬಳ್ಳಿ:ನಗರದಲ್ಲಿ ಇಂದು ನಡೆದ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯದ ಭವಿಷ್ಯ ಇನ್ಮುಂದೆ ಬದಲಾಗಲಿದೆ ಅನ್ನೋ ವಿಶ್ವಾಸವಿದೆ. ಕರ್ನಾಟಕದ ಜನರು ವಿವಿಧ ಕ್ಷೇತ್ರಗಳಲ್ಲಿ ದೇಶದ ಹೆಸರನ್ನು ಬೆಳಗಿಸಿದ್ದೀರಿ. ಇಂದಿರಾ ಗಾಂಧಿಯವರು ರಾಜಕೀಯ ಜೀವನದಲ್ಲಿ ಹೋರಾಡುತ್ತಿದ್ದಾಗ ಚಿಕ್ಕಮಗಳೂರು ಜನರು ಕೈಹಿಡಿದಿದ್ದರು ಎಂದು ಸ್ಮರಿಸಿದರು.

24 ವರ್ಷಗಳ ಹಿಂದೆ ನನಗೂ ಬಳ್ಳಾರಿ ಜನರು ಬೆಂಬಲಿಸಿದ್ದರು. ದ್ವೇಷ ಹರಡುವವರ ವಿರುದ್ಧ ಭಾರತ್ ಜೋಡೋ ಯಾತ್ರೆ ಮಾಡಲಾಗಿತ್ತು. ಕೇಂದ್ರ ಸರ್ಕಾರದ ದ್ವೇಷದ ರಾಜಕಾರಣ ತೊಲಗಿಸುವವರೆಗೆ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯವರು ಲೂಟಿಯನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ. 40 ಪರ್ಸೆಂಟ್ ಸರ್ಕಾರ ಜನರನ್ನು ಲೂಟಿ ಮಾಡಿದೆ, ಸರ್ಕಾರ ಜನರ ಪ್ರಶ್ನೆಗಳಿಗೆ ಉತ್ತರಿಸಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿಯವರು ಸಾಂವಿಧಾನಾತ್ಮಕ ಸಂಸ್ಥೆಗಳು ತಮ್ಮ ಜೇಬಲ್ಲಿವೆ ಎಂದು ಭಾವಿಸುತ್ತಾರೆ. ಪ್ರಜಾಪ್ರಭುತ್ವ ಹೀಗೆ ನಡೆಯುತ್ತಾ‌‌?. ಇವರು ಧಮ್ಕಿ ಹಾಕುತ್ತಾರೆ, ಬಿಜೆಪಿ ಸೋತರೆ ಜಗಳವಾಗುತ್ತೆ ಅಂತಾರೆ. ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಸಿಗಲ್ಲಾ ಅಂತಾರೆ. ಕರ್ನಾಟಕದ ಜನರನ್ನು ಇಷ್ಟೊಂದು ಕೇವಲವಾಗಿ ಭಾವಿಸಬೇಡಿ. ಕರ್ನಾಟಕದ ಜನರು ಯಾರದೋ ಆಶೀರ್ವಾದ ಬಯಸಲ್ಲಾ. ಇಲ್ಲಿನ ಜನರಿಗೆ ತಮ್ಮ ಶಕ್ತಿ, ಪರಿಶ್ರಮದ ಮೇಲೆ ವಿಶ್ವಾಸವಿದೆ ಎಂದರು.

ಕರ್ನಾಟಕದ ಜನರು ಯಾರಿಗೂ ಹೆದರಲ್ಲಾ, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ನಂದಿನಿಯನ್ನು ಲೂಟಿ ಮಾಡಿ ಹಾಳು ಮಾಡುತ್ತಿದ್ದಾರೆ. ಜನರು ತಮ್ಮ ಹಣೆಬರಹದ ನಿರ್ಧಾರ ತಾವೇ ಮಾಡುತ್ತಾರೆ. ಕರ್ನಾಟಕ ಬಸವೇಶ್ವರರ ಪುಣ್ಯ ಭೂಮಿ. ಬಸವೇಶ್ವರರು ಎಲ್ಲರಿಗೂ ಸಮಾನತೆಯ ಸಂದೇಶ ಸಾರಿದ್ದರು. ಮಹಾನ್ ಕವಿ ಕುವೆಂಪು ಅವರ ಜನ್ಮ ಭೂಮಿ, ಅವರ ಭಾವನೆಯನ್ನು ಪ್ರತಿನಿತ್ಯ ಬಿಜೆಪಿ ಕದಡುತ್ತಿದೆ. ಬಿಜೆಪಿಯವರೇ ಸ್ವಾರ್ಥಕ್ಕಾಗಿ ಕರ್ನಾಟಕವನ್ನು ಬಲಿ ಕೊಡಬೇಡಿ ಎಂದು ಕಿಡಿಕಾರಿದರು.

ಲೂಟಿ, ಕಮೀಷನ್ ಮುಕ್ತವಾದ ಸರ್ಕಾರಕ್ಕಾಗಿ ಕಾಂಗ್ರೆಸ್ ಮೇಲೆ ಭರವಸೆ ಇಡಿ. ರಾಜಸ್ಥಾನ, ಹಿಮಾಚಲ, ಛತ್ತೀಸ್​ಗಡದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದೆ. ಕರ್ನಾಟಕ ಯಾವುದೇ ಸನ್ನಿವೇಶದಲ್ಲೂ ನಿಮ್ಮ ವಿಶ್ವಾಸ ಉಳಿಸಿಕೊಳ್ಳಲಿದೆ. ಎಲ್ಲಾ ಭಾಗ್ಯಗಳನ್ನು ಈಡೇರಿಸುತ್ತೇವೆ. ಬಿಜೆಪಿಯಿಂದ ಕರ್ನಾಟಕದ ಲೂಟಿ ತಡೆಯಲು ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಗೆಲ್ಲಿಸಿ. ಪ್ರಗತಿಯ ಗ್ಯಾರಂಟಿ ಕೊಡುವ ಸರ್ಕಾರ ತರಲು ಆಶೀರ್ವದಿಸಿ ಎಂದು ಜನರಲ್ಲಿ ಮನವಿ ಮಾಡಿದರು.

ನಂತರ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕರ್ಜುನ ಖರ್ಗೆ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟಕ್ಕೆ ಇಡೀ ದೇಶದಲ್ಲಿ ನಾವು ಒಗ್ಗಟ್ಟಾಗಬೇಕಿದೆ. ಜೈ ಭಜರಂಗ ಬಲಿ ತೋಡ್ ದೋ ಭ್ರಷ್ಟಾಚಾರಕಿ ನಹಿ ಇದು ನಮ್ಮ ಧ್ಯೇಯ ವಾಕ್ಯ. ಭ್ರಷ್ಟಾಚಾರ ಮಿತಿ ಮೀರಿದೆ. 40 ಪರ್ಸೆಂಟ್ ಭ್ರಷ್ಟಾಚಾರ ರಾಜ್ಯದಲ್ಲಿ ನಡೆಯುತ್ತಿದೆ. ನಾ ಖಾವೂಂಗ, ನಾ ಖಾನೇ ದೂಂಗಾ ಅಂತಾರೆ. ಆದರೆ ಭ್ರಷ್ಟಾಚಾರ ನಡೆದಾಗ ಕಣ್ಣುಮುಚ್ಚಿ ಕೂರುತ್ತಾರೆ ಎಂದು ಪ್ರಧಾನಿ ಮೋದಿಯನ್ನು ಖರ್ಗೆ ಟೀಕಿಸಿದರು.

ದೇಶದಲ್ಲಿ ನಿರುದ್ಯೋಗ ತೀವ್ರಗೊಂಡಿದೆ, ರೈತರ ಆದಾಯ ದ್ವಿಗುಣ ಮಾಡ್ತೇವೆ ಅಂದರು ಹೇಳಿದ್ದನ್ನು ಯಾವುದನ್ನೂ ಮಾಡಿಲ್ಲ. ಒಬ್ಬ ಸುಳ್ಳು ಸರ್ಕಾರವನ್ನು ಬೆಂಬಲಿಸ್ತೀರಾ?. ಸತ್ಯ ಹೇಳುವವರನ್ನು ಬೆಂಬಲಿಸ್ತೀರಾ? ಎಂದು ಪ್ರಶ್ನಿಸಿದರು. ಕೆಟ್ಟ ಸರ್ಕಾರವನ್ನು ಕಿತ್ತೊಗೆಯಬೇಕು ಈ ಸರ್ಕಾರ 10 ರಂದು ಮನೆಗೆ ಹೋಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ನಾವು ಐದು ವಚನಗಳನ್ನು ಕೊಟ್ಟಿದ್ದೇವೆ. ಅದನ್ನು ಜಾರಿಗೆ ತಂದೇ ತರುತ್ತೇವೆ ಎಂದು ಭರವಸೆ ನೀಡಿದ್ರು.

ಕಾಂಗ್ರೆಸ್ ನವರು ಎಂದೂ ವಚನಭ್ರಷ್ಟರಾಗಿಲ್ಲ, ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ನೀವು ಸಹಕರಿಸಿ. ದಿನ ಜೈಕಾರ ಹೊಡೆದು ಮತದಾನದ ದಿನ ನಿದ್ರೆಗೆ ಹೋಗಬೇಡಿ. ಪ್ರೀತಿ ನಮ್ಮ ಮೇಲೆ, ಇನ್ನೊಬ್ಬರ ಜೊತೆ ಲಗ್ನ ಅನ್ನುವಂತಾಗಬಾರದು. ಯಾರನ್ನು ಪ್ರೀತಿಸ್ತೀರೊ ಅವರಿಗೆ ಮೊದಲು ಮತ ಹಾಕಿ ಎಂದು ಜನರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ:ನಮಗೆ 150 ಸೀಟ್ ಬರದಿದ್ದರೆ ನಮ್ಮ ಶಾಸಕರನ್ನು ಬಿಜೆಪಿ ಕದಿಯುತ್ತದೆ: ರಾಹುಲ್ ಗಾಂಧಿ ವಾಗ್ದಾಳಿ

Last Updated : May 6, 2023, 9:44 PM IST

ABOUT THE AUTHOR

...view details