ಹುಬ್ಬಳ್ಳಿ:ಬಿ.ಎಲ್.ಸಂತೋಷ್ ಅವರು ಮೊದಲು ಬಿಜೆಪಿಯಲ್ಲಿರುವ ಶಾಸಕರು, ಮಾಜಿ ಶಾಸಕರನ್ನು ಉಳಿಸಿಕೊಳ್ಳಲಿ. ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಉಳಸಿಕೊಂಡರೆ ಸಾಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಬಿ.ಎಲ್.ಸಂತೋಷ್ ಹೇಳಿಕೆಗೆ ತಿರುಗೇಟು ನೀಡುತ್ತಾ, ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನು ಬಿಟ್ಟುಬಿಡಲಿ. ಬಿಜೆಪಿ ಬರೀ ಆಪರೇಷನ್ ಮಾಡಿ ಸರ್ಕಾರ ರಚನೆ ಮಾಡೋದಾ? ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ. ಕಾಂಗ್ರೆಸ್‌ಗೆ 136 ಸೀಟ್ ಬಂದಿದೆ. ಬೆಳಗ್ಗೆಯಿಂದ ಸಾಯಂಕಾಲದವರೆಗೂ ಆಪರೇಷನ್ ಮಾಡೋದೇ ಬಿಜೆಪಿ ಕೆಲಸ. ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು ನಿಮ್ಮ ಕೆಲಸವಾಗಿದೆ. ದಿನದಿಂದ ದಿನಕ್ಕೆ ಪಕ್ಷ ಅಧೋಗತಿಗೆ ಹೋಗ್ತಿದೆ. ಬಿಜೆಪಿ ಮುಳುಗುತ್ತಿರುವ ಹಡಗು ಎಂದು ಟೀಕಿಸಿದರು.
ಕಾಂಗ್ರೆಸ್ ಶಾಸಕರು ಅವರ ಸಂಪರ್ಕದಲ್ಲಿದ್ದರೆ ನಾಳೆಯಿಂದನೇ ಆಪರೇಷನ್ ಶುರು ಮಾಡಲಿ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗಟ್ಟಿಮುಟ್ಟಾಗಿದೆ. ಅಂಥದ್ರಲ್ಲಿ ಯಾರು ರಾಜೀನಾಮೆ ಕೊಟ್ಟು ಹೋಗ್ತಾರೆ?. ಬಿ.ಎಲ್.ಸಂತೋಷ್ ಬಗ್ಗೆ ಬಿಜೆಪಿ ಯೋಚನೆ ಮಾಡಬೇಕು. ದೆಹಲಿಯಲ್ಲಿ ಕೂತ ನಾಯಕರು ಯೋಚನೆ ಮಾಡಿದರೆ ಒಳ್ಳೆಯದು ಎಂದರು.