ಹುಬ್ಬಳ್ಳಿ:ಕಾಂಗ್ರೆಸ್‌ನವರು ಚುನಾವಣೆಗೆ ಮುಂಚೆ ಬಹಳಷ್ಟು ಭರವಸೆಗಳನ್ನು ಕೊಡ್ತಾರೆ. ಆದರೆ ಚುನಾವಣೆ ಮುಗಿದ ಬಳಿಕ ಏನೂ ಮಾಡುವುದಿಲ್ಲ. ಅವರದ್ದು ಕೇವಲ ಓಟ್ ಬ್ಯಾಂಕ್ ಪಾಲಿಟಿಕ್ಸ್ ಎಂದು ಎಐಎಂಐಎಂ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದಿನ್ ಓವೈಸಿ ಟೀಕಿಸಿದರು.
ಪಕ್ಷದ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹುಬ್ಬಳ್ಳಿಗೆ ಆಗಮಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ಈ ಹಿಂದೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಿಸುತ್ತೇವೆ ಎಂದು ಕಾಂಗ್ರೆಸ್‌ನವರು ನಿರ್ಣಯ ಪಾಸ್ ಮಾಡಿದ್ದರು. ಆದರೆ ನಂತರದಲ್ಲಿ ಮಾಡಿದ್ದೇನು ಎಂದು ಕೇಳಿದರು.
ಜಗದೀಶ್ ಶೆಟ್ಟರ್ ಅವರ ಜೀವನ ಆರ್‌ಎಸ್‌ಎಸ್‌ನಿಂದ ಆರಂಭವಾಯಿತು. ಅಂಥವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿದೆ. ಅವರನ್ನು ಕರೆದುಕೊಂಡು ಬಂದ ಬಳಿಕ ಅವರು ಜಾತ್ಯತೀತರಾಗಿ ಬಿಟ್ಟಿದ್ದಾರಾ? ಕಾಂಗ್ರೆಸ್ ಪಕ್ಷದವರು ಜಾತ್ಯಾತೀತ ಎನ್ನುವ ಪ್ರಮಾಣ ಪತ್ರ ಮಾಡುವ ನೋಟರಿಯವರಾ ಎಂದು ವ್ಯಂಗ್ಯವಾಗಿ ಹೇಳಿದರು.
ಮುಸ್ಲಿಮರ ಮತಗಳನ್ನು ವಿಭಜಿಸಲು ಬಿಜೆಪಿ ಓವೈಸಿಯನ್ನು ಕರೆದು ತಂದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಹಾಗಿದ್ದರೆ ರಾಹುಲ್ ಗಾಂಧಿ ಸೋಲಿಗೂ ನಾನೇ ಕಾರಣವೇ? ಕರ್ನಾಟಕದಲ್ಲಿ ಎರಡು ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದರು.
ನಿಮ್ಮ ಚುನಾವಣೆ ನೀವು ಮಾಡಿ, ನಮ್ಮ ಚುನಾವಣೆಯನ್ನು ನಾವು ಮಾಡುತ್ತೇವೆ. ನಮ್ಮ ಪಕ್ಷದ ತಂತ್ರಗಾರಿಕೆಗೆ ಅನುಗುಣವಾಗಿ ಚುನಾವಣೆ ಮಾಡುತ್ತೇವೆ. ಯಾರನ್ನೋ ಗೆಲ್ಲಿಸಲು ಯಾರನ್ನೋ ಸೋಲಿಸಲು ಚುನಾವಣೆ ಮಾಡುವುದಿಲ್ಲ. ನಾವು ಗೆಲ್ಲಲು ಚುನಾವಣೆ ಎದುರಿಸುತ್ತೇವೆ. ಇನ್ನೊಬ್ಬರನ್ನು ಗೆಲ್ಲಿಸುವುದರಿಂದ ನಮಗೇನು ಲಾಭ? ಎಂದು ಓವೈಸಿ ತಿರುಗೇಟು ಕೊಟ್ಟರು.