ಹುಬ್ಬಳ್ಳಿ:ನಗರದ ಹೆಗ್ಗೇರಿಯಲ್ಲಿರುವ ಆರ್ಎಸ್ಎಸ್ ಕಚೇರಿಯಲ್ಲಿ ಸಂಘದ ಪ್ರಮುಖರಿಗೆ ವಿದ್ಯಾನಗರ ಬ್ಲಾಕ್ನ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರ ನೇತೃತ್ವದಲ್ಲಿ ಖಾದಿಯಿಂದ ತಯಾರಿಸಿದ ತ್ರಿವರ್ಣ ರಾಷ್ಟ್ರಧ್ವಜಗಳನ್ನು ನೀಡಿದರು.
ಕೇಂದ್ರ ಸರ್ಕಾರದ ಆದೇಶದಂತೆ ಕಳೆದ ಏಳು ದಿನಗಳಿಂದ ಭಾರತೀಯರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ ಭಾವಚಿತ್ರವನ್ನು ಪ್ರೊಫೈಲ್ ಫೋಟೋ ಆಗಿ ಪ್ರದರ್ಶಿಸಿದ್ದಾರೆ. ಆದರೆ ಈವರೆಗೂ ಆರ್ಎಸ್ಎಸ್ನವರು ತಮ್ಮ ಫೇಸ್‌ಬುಕ್ ಇನ್ಸ್ಟಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ಭಗವಾಧ್ವಜವನ್ನೇ ಇಟ್ಟುಕೊಂಡಿದ್ದಾರೆ. ಈಶ್ವರಪ್ಪನವರು ತ್ರಿವರ್ಣವನ್ನು ಬದಲಾಯಿಸಿ ಭಗವಾಧ್ವಜವೇ ನಮ್ಮ ರಾಷ್ಟ್ರಧ್ವಜ ಎಂದು ಹೇಳಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದರು.
ರಾಷ್ಟ್ರಧ್ವಜ ವಿತರಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್, ಗೋಲ್ವಲ್ಕರ್ ಯಾವಾಗಲೂ ತ್ರಿವರ್ಣ ಧ್ವಜದ ವಿರುದ್ಧ ಮಾತನಾಡುತ್ತಿದ್ದರು. ಅದೇ ರೀತಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 52 ವರ್ಷಗಳ ಕಾಲ ಆರ್ಎಸ್ಎಸ್ ತ್ರಿವರ್ಣ ರಾಷ್ಟ್ರ ಧ್ವಜಾರೋಹಣ ಮಾಡಿರಲಿಲ್ಲ ಎಂದು ರಜತ್ ಉಳ್ಳಾಗಡ್ಡಿ ಮಠ ಆರೋಪಿಸಿ, ಆರ್ಎಸ್ಎಸ್ ಕಚೇರಿಗೆ ತೆರಳಿ ಧ್ವಜ ನೀಡಲು ಮುಂದಾದರು.
ಈ ಸಂದರ್ಭದಲ್ಲಿ, ನಮಗೆ ರಾಷ್ಟ್ರಧ್ವಜ ಬೇಡ. ಈಗಾಗಲೇ ನಮ್ಮ ಬಳಿ ಧ್ವಜ ಇದೆ ಎಂದು ಆರ್ಎಸ್ಎಸ್ ಮುಖಂಡ ಅಮರನಾಥ್ ಕಚೇರಿಯಲ್ಲಿ ಕಲೆ ಬಿದ್ದಿರುವ ಧ್ವಜ ತಂದು ತೋರಿಸಿದ್ದಾರೆ. ಇದಕ್ಕೆ ತಕರಾರು ತೆಗೆದ ಕಾಂಗ್ರೆಸ್ ಕಾರ್ಯಕರ್ತರು ಕಲೆ ಬಿದ್ದಿರುವ ಧ್ವಜದಿಂದ ಧ್ವಜಾರೋಹಣ ಮಾಡಬಾರದು ಎಂದು ಧ್ವಜ ಸಂಹಿತೆ ಹೇಳುತ್ತದೆ ಎಂದು ಹೇಳಿ ಅಮರನಾಥ್‌ಗೆ ಧ್ವಜ ಹಸ್ತಾಂತರಿಸಿದರು.
ಇದನ್ನೂ ಓದಿ:ಹರ್ ಘರ್ ತಿರಂಗಾ: ರಾಷ್ಟ್ರಧ್ವಜ ಮಾರಾಟ ಜೋರು, ಖಾದಿ ವರ್ತಕರಿಗೆ ತುಸು ಬೇಜಾರು