ಧಾರವಾಡ ಕೃಷಿ ಮೇಳ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ ಧಾರವಾಡ: ರಾಜ್ಯದಲ್ಲಿ ಇನ್ನೂ ಬರಗಾಲ ಘೋಷಣೆ ಮಾಡಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಕೆಲವು ನಿಯಮಾವಳಿಗಳನ್ನು ಮಾಡಿದೆ. ಅವುಗಳನ್ನು ಬದಲಾವಣೆ ಮಾಡಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ಆದರೆ ಕೇಂದ್ರ ಸರ್ಕಾರ ಉತ್ತರವನ್ನೇ ಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಕೃಷಿಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳಸಾ-ಬಂಡೂರಿ, ಮಹದಾಯಿ ಯೋಜನೆಗೆ ಹೋರಾಟ ನಡದೇ ಇದೆ. ಒಂದು ಸಲ ಮೋದಿ ಬಳಿ ಸರ್ವ ಪಕ್ಷ ನಿಯೋಗದಲ್ಲಿ ಹೋಗಿದ್ದೆ. ರೈತ ಹೋರಾಟಗಾರ, ಸ್ವಾಮೀಜಿಗಳು ನಿಯೋಗದಲ್ಲಿ ಇದ್ದರು. ಗೋವಾ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದೆ. ಇಬ್ಬರಲ್ಲಿಯೂ ರಾಜಿ ಮಾಡಿಸಿ ಎಂದು ಕೇಳಿದ್ದೆವು. ಆದರೆ ಪುಣ್ಯಾತ್ಮ ನರೇಂದ್ರ ಮೋದಿ ರಾಜಿ ಮಾಡಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದಿಂದ ಯಾವುದೇ ಸ್ಪಂದನೆ ಇಲ್ಲ: ನ್ಯಾಯಾಧೀಕರಣದ ತೀರ್ಪು ಆಗಿತ್ತು. ತೀರ್ಪು ಬಳಿಕ ನೋಟಿಫಿಕೇಷನ್ ಸಹ ಆಯ್ತು. ಈಗ ಗೋವಾ ಸುಪ್ರಿಂ ಕೋರ್ಟ್‌ಗೆ ಹೋಗಿದೆ. ಮೋದಿ ಗೋವಾದವರನ್ನು ಕರೆದು ಮಾತನಾಡಬೇಕಿತ್ತು, ಆದರೆ ಮಾಡಿಲ್ಲ. ಅರಣ್ಯ ಮತ್ತು ಪರಿಸರ ಸಚಿವಾಲಯ ಕ್ಲಿಯರನ್ಸ್ ಒಂದೇ ಈಗ ಬಾಕಿ ಇದೆ. ಈಗ ಪುನಃ ಸರ್ವ ಪಕ್ಷ ನಿಯೋಗದಲ್ಲಿ ಹೋಗಬೇಕಿತ್ತು. ಇದಕ್ಕಾಗಿ ಸಮಯ ಕೊಡಿ ಎಂದು ಮೋದಿಯವರಿಗೆ ಪತ್ರ ಬರೆದಿದ್ದೇನೆ. ಆದರೆ ಯಾವುದೇ ಸ್ಪಂದನೆ ಬಂದಿಲ್ಲ. ಇವತ್ತು ಸಹ ರೈತ ಹೋರಾಟಗಾರರು ನನ್ನ ಭೇಟಿಯಾಗಿದ್ದಾರೆ. ಹೋರಾಟ ಮಾಡುವ ರೈತರು ಮಾಡಲಿ. ಆದರೆ ಪರಿಸರ ಮತ್ತು ಅರಣ್ಯ ಸಚಿವಾಲಯದ ಕ್ಲಿಯರನ್ಸ್ ಕೇಂದ್ರ ಸರ್ಕಾರ ಮಾಡಬೇಕು. ಗೋವಾಗೂ ಬುದ್ಧಿ ಹೇಳುವ ಕೆಲಸ ಆಗಬೇಕು. ಕ್ಲಿಯರನ್ಸ್ ಆದ ತಕ್ಷಣವೇ ಕಾಮಗಾರಿ ಆರಂಭಿಸುತ್ತೇವೆ. ಮಹದಾಯಿಗೆ ಅನುದಾನದ ಕೊರತೆ ಇಲ್ಲ ಅದಕ್ಕಾಗಿ ಹಣ ಇದ್ದೇ ಇದೆ ಎಂದು ಸ್ಪಷ್ಟಪಡಿಸಿದರು.
ಕೃಷಿ ವಿವಿಗೂ ನೀರಾವರಿ ಇಲಾಖೆಗೂ ಸಂಪರ್ಕ ಸಂವಹನ ಇರಬೇಕು. ಇದರಿಂದ ಕೃಷಿ ಕಾರ್ಯಕ್ಕೆ ಅನುಕೂಲ ಆಗುತ್ತದೆ. ಕೃಷಿ ಇಲಾಖೆ, ಕೃಷಿ ವಿವಿ ಮತ್ತು ನೀರಾವರಿ ಇಲಾಖೆ ಸೇರಿ ಕೆಲಸ ಮಾಡಬೇಕು. ಇದರಿಂದ ರೈತರ ಕೃಷಿಗೆ ನೀರು ಒದಗಿಸಲು ಅನುಕೂಲ ಆಗುತ್ತದೆ. 75 ವರ್ಷದಿಂದ ಧಾರವಾಡದಲ್ಲಿ ಕೃಷಿ ವಿವಿ ಇದೆ. ಇಷ್ಟು ವರ್ಷ ಏನೂ ಆಗಿಲ್ಲ ಅಂತಾ ನಾನು ಹೇಳುವುದಿಲ್ಲ, ಆದರೆ ಇನ್ನು ಹೆಚ್ಚು ರೈತರಿಗೆ ತಲುಪುವ ಕೆಲಸ ಆಗಬೇಕು. ಈ ಮೇಳದಲ್ಲಿ ನಾಲ್ಕು ದಿನ 15 ಲಕ್ಷಕ್ಕೂ ಹೆಚ್ಚು ಜನ ಬರ್ತಾರೆ. ಆದರೆ ಇಲ್ಲಿ ಬಂದು ಹೋಗುವವರಲ್ಲಿ ಕೃಷಿ ಆಸಕ್ತಿ ಹೆಚ್ಚಾಗುವಂತೆ ಮಾಡಬೇಕು. ಇತ್ತೀಚೆಗೆ ಜನ ಸಿರಿಧಾನ್ಯ ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಬಗ್ಗೆ ರೈತರಿಗೆ ತಿಳಿವಳಿಕೆ ಬರಬೇಕು. ಹಿಂದೆ ನಾವು ಸಾವೆ, ನವಲು, ಆರ್ಕ ಬೆಳೆಯುತ್ತಿದ್ದೆವು. ಆದರೆ ಈಗ ಯಾರೂ ಬೆಳೆಯೋದೇ ಇಲ್ಲ ಎಂದರು.
ಕೃಷಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಆಗುತ್ತದೆ. ಉದ್ಯೋಗ ಸೃಷ್ಟಿ ಆಗುತ್ತದೆ. ಕೃಷಿ ಅವಲಂಬಿತ ರೈತರ ಆದಾಯ ಸಹ ಹೆಚ್ಚಾಗಲು ಸಾಧ್ಯ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಮ್ಮ ದೇಶ ಕೃಷಿ ಪ್ರಧಾನ ದೇಶ, ಆದರೆ ಈಗ ಕೃಷಿ ಲಾಭದಾಯಕ ಅಲ್ಲ ಎಂದು ಕೆಲವರು ಕೃಷಿಯಿಂದ ಹಿಂದಡಿ ಇಡುತ್ತಿದ್ದಾರೆ. ಮಳೆಯಾಶ್ರಿತ ಕೃಷಿ ನಮ್ಮ ದೇಶದಲ್ಲಿ ಹೆಚ್ಚು. ಕೃಷಿ ವಿವಿಗಳ ಪಾತ್ರ ಬಹಳ ಮಹತ್ವ ಆಗಿದೆ. ಒಣ ಬೇಸಾಯಕ್ಕೆ ನಮ್ಮಲ್ಲಿ ಹೆಚ್ಚು ಭೂಮಿ ಇದೆ. ಒಣ ಬೇಸಾಯಕ್ಕೆ ಹೆಚ್ಚು ಗಮನ ಕೊಡುವುದು ಕೃಷಿ ವಿವಿಗಳ ಕರ್ತವ್ಯವಾಗಬೇಕು ಎಂದರು.
ಇನ್ನೊಂದು ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ: ಇನ್ನೂ ಕೃಷಿ ಸಚಿವ ಚೆಲುವರಾಯ ಸ್ವಾಮಿ, ರಾಜ್ಯದಲ್ಲಿ ಬರಗಾಲ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಇನ್ನೊಂದು ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ ಇದೆ ಎಂದು ಸುಳಿವು ಕೊಟ್ಟರು. ಬರಗಾಲ ಘೋಷಣೆಗೆ ಆಗ್ರಹ ಕೇಳಿ ಬಂದಿದೆ. ಶಾಸಕರು, ರೈತರು, ಸಾರ್ವಜನಿಕರಿಂದ ಬರಗಾಲದ ಕೂಗು ಕೇಳಿ ಬಂದಿದೆ. ಈಗಾಗಲೇ ಸಿಎಂ ಕ್ಯಾಬಿನೆಟ್ ಉಪಸಮಿತಿ ಮಾಡಿದ್ದಾರೆ. ನಮ್ಮನ್ನೆಲ್ಲ ಸೇರಿಸಿ ಸಮಿತಿ ಮಾಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಮಾರ್ಗಸೂಚಿಯಲ್ಲಿ ಬದಲಾವಣೆ ಕೇಳಿದ್ದೇವೆ ಎರಡ್ಮೂರು ಸಲ ಕೇಳಿದರೂ ಕೇಂದ್ರ ಸರ್ಕಾರ ಪ್ರತಿಕ್ರಿಯಿಸುತ್ತಿಲ್ಲ. ಎರಡ್ಮೂರು ದಿನಗಳಲ್ಲಿ ಬರಗಾಲ ಘೋಷಣೆಯ ಸಭೆ ಆಗಲಿದೆ. ಈಗಾಗಲೇ ನಮ್ಮ ಉಪಸಮಿತಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಎಲ್ಲ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇವೆ ಎಂದರು.
62 ತಾಲೂಕಿಗೆ ಬರಗಾಲ ಘೋಷಣೆ ಅವಕಾಶ ಇತ್ತು. ಆದರೆ, ನಾವು ಇನ್ನೂ 130 ತಾಲೂಕು ಸೇರಿಸಲು ಮುಂದಾಗಿದ್ದೇವೆ. ಅದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಬದಲಾವಣೆಗೆ ಕೇಳಿದ್ದೇವೆ. ರಾಜ್ಯದ 196 ತಾಲೂಕುಗಳಲ್ಲಿ ಬರ ಇದೆ. ಅದನ್ನೆಲ್ಲ ಬರಗಾಲ ಘೋಷಿಸುವ ಉದ್ದೇಶ ನಮಗಿದೆ ಎಂದರು.
ಸ್ವತಂತ್ರ ಬಂದ ಅನೇಕ ವರ್ಷಗಳಿಂದ ರೈತರಿಗೆ ಸಮಸ್ಯೆ, ಸವಾಲುಗಳು ಇವೆ. ರೈತರ ಬೆಳೆಗೆ ಬೆಲೆ, ಮಾರುಕಟ್ಟೆ ವ್ಯವಸ್ಥೆಯಿಂದ ನೋವು ಅನುಭವಿಸುತ್ತಿದ್ದಾರೆ. ಪ್ರಕೃತಿಯ ವ್ಯತ್ಯಾಸಗಳಿಂದ ನೋವು ಉನ್ನುತ್ತಿದ್ದಾರೆ. 2013ರಿಂದ 2018ರವರೆಗೆ ಸಿಎಂ ಸಿದ್ದರಾಮಯ್ಯ ಮಾಡಿದ ಕೆಲಸ ನೋಡಿದ್ದಿರಾ? ಅವರು ಕೃಷಿ ಸಾಲ ಮನ್ನಾದ ಯೋಜನೆ ಮಾಡಿದವರು. ಹಾಲಿನ ಸಬ್ಸಿಡಿ 2 ರೂ. ದಿಂದ 5 ರೂಗೆ ಏರಿಸಿದ ಕೀರ್ತಿ ಸಿದ್ದರಾಮಯ್ಯ ಗೆ ಸೇರಬೇಕು ಎಂದು ಹೊಗಳಿದರು.
ಅದಾದ ಬಳಿಕ ಜೆಡಿಎಸ್-ಬಿಜೆಪಿ ಏನು ಕೊಟ್ಟಿತು? ನೀವೆ ವಿಚಾರ ಮಾಡಿ ಈಗ ಮತ್ತೆ 2023ರ ಚುನಾವಣೆಯಲ್ಲಿ ನೀವು ಸಂಪೂರ್ಣ ಆಶೀರ್ವಾದ ಮಾಡಿದ್ದೀರಿ. ದೇಶದಲ್ಲಿ ಯಾರೂ ಮಾಡದ ಕಾರ್ಯಕ್ರಮ ಕೊಟ್ಟ ಏಕೈಕ ಸಿಎಂ ಸಿದ್ದರಾಮಯ್ಯ. ಪ್ರಧಾನಿಯಿಂದ ಹಿಡಿದು ರಾಜ್ಯದ ವಿರೋಧ ಪಕ್ಷದ ನಾಯಕರೂ ಟೀಕೆ ಟಿಪ್ಪಣಿ ಮಾಡಿದ್ದಾರೆ. ಅದನ್ನೆಲ್ಲ ಮೆಟ್ಟಿ ನಿಂತವರು ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ತಂದಿದ್ದಾರೆ. ಈ ಸರ್ಕಾರ ಏನು ಮಾಡಿತು ಅಂತಾ ಅನೇಕರು ಮಾತನಾಡುತ್ತಾರೆ. ಹಿಂದೆ ಸರ್ಕಾರ ಬಂದು ವರ್ಷವಾದರೂ ಒಂದು ಕಾರ್ಯಕ್ರಮ ಆಗಿರಲಿಲ್ಲ. ಆದರೆ ನಾವು ಮೂರೇ ತಿಂಗಳಲ್ಲಿ ಅನೇಕ ಕಾರ್ಯ ಮಾಡಿದ್ದೇವೆ. ರೈತರ ಬೆನ್ನಿಗೆ ನಿಲ್ಲುವ ಏಕೈಕ ಸಮರ್ಥ ನಾಯಕ ಸಿದ್ದರಾಮಯ್ಯ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿದರು. ಮೇಳದಲ್ಲಿ ಶ್ರೇಷ್ಠ ಕೃಷಿ ಮಹಿಳೆ ಹಾಗೂ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು.
ವಿಸ್ಮಯಕಾರಿ ಕೀಟ ಪ್ರಪಂಚ ಉದ್ಘಾಟನೆ: ಕೃಷಿ ವಿಶ್ವ ವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಹಾಗೂ ವಿಸ್ಮಯಕಾರಿ ಕೀಟ ಪ್ರಪಂಚ ಸೇರಿದಂತೆ ಹಲವು ಮೇಳಗಳನ್ನು ಸಿಎಂ ಉದ್ಘಾಟಿಸಿದರು. ಬಳಿಕ ಹಲವು ಬಗೆಯ ಸಸ್ಯಗಳನ್ನು ಹಾಗೂ ವಿವಿಧ ಹೂವಿನ ಅಲಂಕಾರ ಸಿಎಂ ಸಿದ್ದರಾಮಯ್ಯ ವೀಕ್ಷಣೆ ಮಾಡಿದರು. ಸಿಎಂಗೆ ಸಚಿವ ಸಂತೋಷ್ ಲಾಡ್ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್ ನೀಡಿದರು. ಸುಸ್ಥಿರ ಕೃಷಿಗೆ ಸಿರಿಧಾನ್ಯಗಳು ಘೋಷ್ಯವಾಕ್ಯದಲ್ಲಿ ಕೃಷಿ ಮೇಳ ನಡೆಯಲಿದ್ದು, ನಾಲ್ಕು ದಿನಗಳ ಮೇಳಕ್ಕೆ 10 ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರದರ್ಶನಕ್ಕಾಗಿ 191 ಹೈಟೆಕ್ ಮಳಿಗೆ, 351 ಸಾಮಾನ್ಯ ಮಳಿಗೆ, 24 ಯಂತ್ರೋಪಕರಣ, 50 ಜಾನುವಾರು ಪ್ರದರ್ಶನ ಮಳಿಗೆಗಳನ್ನು ಹಾಕಲಾಗಿದೆ.
ಇದನ್ನೂ ಓದಿ:'ಹಸಿರು ಪರಿಸರದಲ್ಲಿ ಸಂತಸದಾಯಕ ಕಲಿಕೆ': ದಕ್ಷಿಣ ಕನ್ನಡದ ಮಾದರಿ ಸರ್ಕಾರಿ ಶಾಲೆಯಲ್ಲಿದೆ ಕೃಷಿ ಭಂಡಾರ!