ಹುಬ್ಬಳ್ಳಿ: ಕಳಸಾ ಬಂಡೂರಿ ಮಹದಾಯಿ ಯೋಜನೆಗೆ ರಾಜ್ಯದ ಬಜೆಟ್ನಲ್ಲಿ 1677 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹವಾಗಿದೆ. ಆದರೆ, ಈ ನಿರ್ಧಾರ ಕೇವಲ ಘೋಷಣೆಯಾಗಿಯೇ ಉಳಿಯಬಾರದು, ಕೆಲಸ ಕೈಗೆತ್ತಿಕೊಳ್ಳಬೇಕು ಎಂದು ಕಳಸಾ ಬಂಡೂರಿ ಹೋರಾಟಗಾರ ಸಿದ್ದು ತೇಜಿ ಹೇಳಿದ್ದಾರೆ.
ರಾಜ್ಯ ಬಜೆಟ್ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸರ್ಕಾರ 500 ಕೋಟಿಯನ್ನು ಮಹದಾಯಿ ಯೋಜನೆಗೆಂದು ಬಿಡುಗಡೆ ಮಾಡಿತ್ತು. ಆದರೆ, ಇದುವರೆಗೂ ಯಾವುದೇ ಕಾಮಗಾರಿಯನ್ನೂ ಕೈಗೆತ್ತಿಕೊಂಡಿಲ್ಲ. ಘೋಷಣೆಗಳು ಘೋಷಣೆ ಆಗಿಯೇ ಉಳಿಯಬಾರದು. ಅವುಗಳನ್ನು ಕಾರ್ಯರೂಪಕ್ಕೆ ತರುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಬೇಕಿದೆ ಎಂದರು.
ವೈ.ಎಂ. ಖಟಾವಕರ್ ಹಾಗೂ ಕಳಸಾ ಬಂಡೂರಿ ಹೋರಾಟಗಾರ ಸಿದ್ಧು ತೇಜಿ ಮಾತನಾಡಿದರು. ಈ ಬಾರಿ ಬಜೆಟ್ನಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನೀರಾವರಿಗೆ ಆದ್ಯತೆ ನೀಡಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದ್ದು, ಜನರ ಅಪೇಕ್ಷೆಯಂತೆ ಯೋಜನೆಗಳು ಶೀಘ್ರವಾಗಿ ಪ್ರಾರಂಭಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೊಂದು ಯಥಾಸ್ಥಿತಿ ಬಜೆಟ್:ಈ ಬಾರಿ ರಾಜ್ಯ ಬಜೆಟ್ ಸಾಮಾನ್ಯ ಬಜೆಟ್ ಆಗಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಯಾವುದೇ ತೆರಿಗೆ ಭಾರ ಹೇರದೆ ಇರುವುದು ಸಮಾಧಾನಕರ ಸಂಗತಿ ಎಂದು ಚಾರ್ಟರ್ಡ್ ಅಕೌಂಟೆಂಟ್ ವೈ.ಎಂ. ಖಟಾವಕರ್ ಅಭಿಪ್ರಾಯಪಟ್ಟಿದ್ದಾರೆ.
ವೈದ್ಯಕೀಯ ಕ್ಷೇತ್ರಕ್ಕೆ ಉತ್ತಮ ಅನುದಾನ ನೀಡಲಾಗಿದೆ ಎಂದ ಅವರು, ಇದು ಯಾವುದೇ ಜನವಿರೋಧಿ ಬಜೆಟ್ ಅಲ್ಲ. ಯಥಾಸ್ಥಿತಿ ಕಾಪಾಡಿಕೊಂಡು ಹೋಗಿರುವ ಬಜೆಟ್ ಆಗಿದೆ ಎಂದರು.
ಯಾವುದೇ ರೀತಿಯ ತೆರಿಗೆಯನ್ನು ಹೇರದೆ ಇರುವುದು ಹಾಗೂ ಸೆಸ್ ವೃದ್ಧಿ ಮಾಡದೇ ಇರುವುದು ಒಂದು ಉತ್ತಮ ಅಂಶವಾಗಿದ್ದು, ಒಟ್ಟಿನಲ್ಲಿ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಯಥಾಸ್ಥಿತಿ ಕಾಪಾಡಿಕೊಂಡ ಬಜೆಟ್ ಆಗಿದೆ ಎಂದು ತಿಳಿಸಿದರು.