ಹುಬ್ಬಳ್ಳಿ:ಕನ್ನಡ ರಾಜ್ಯೋತ್ಸವ ಬಂದ್ರೆ ಕನ್ನಡಾಭಿಮಾನಿಗಳ ಎದೆಯಲ್ಲಿ ರೋಮಾಂಚನವಾಗುತ್ತದೆ. ಅದರಂತೆ ಹುಬ್ಬಳ್ಳಿ ವಾಯವ್ಯ ಕರ್ನಾಟಕ ಸಾರಿಗೆ ಬಸ್ ಚಾಲಕನೋರ್ವ ಕನ್ನಡಾಭಿಮಾನವನ್ನು ಬಸ್ನಲ್ಲಿ ತೋರ್ಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಿತ್ಯ ಬಸ್ನಲ್ಲಿ ಸಾವಿರಾರು ಜನ ಸಂಚರಿಸುತ್ತಾರೆ. ಆದರೆ ಅದೇ ಬಸ್ ಇಂದು ಕನ್ನಡ ರಥದಂತೆ ಶೃಂಗಾರಗೊಂಡು ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಹೌದು, ಹುಬ್ಬಳ್ಳಿ - ರಾಣೆಬೆನ್ನೂರು ನಡುವೆ ಸಂಚರಿಸುವ ಬಸ್ ಅನ್ನು ಚಾಲಕ ನಾಗರಾಜ್ ಬೊಮ್ಮನವರ್ ಮುತುವರ್ಜಿ ವಹಿಸಿ ಇಡೀ ಬಸ್ಅನ್ನು ಸಂಪೂರ್ಣ ಕನ್ನಡಮಯವಾಗಿಸಿದ್ದಾರೆ.
ಬಸ್ನ ಇಂಚಿಂಚು ಜಾಗದಲ್ಲಿಯೂ ಕನ್ನಡ ಭಾಷೆ ಸೂಸುವ ಕಾರ್ಯವನ್ನು ಮಾಡಿದ್ದು, ಕನ್ನಡ ಧ್ವಜ ಬಿಂಬಿಸುವ ವರ್ಣದ ಬಲೂನ್ಗಳಿಂದ ಅಲಂಕಾರ ಮಾಡಲಾಗಿದೆ. ಬಸ್ ಒಳಗೆ ಸೀಟುಗಳಿಗೂ ಕನ್ನಡ ಧ್ವಜದಿಂದ ಶೃಂಗಾರಗೊಳಿಸಲಾಗಿದೆ. ಬಸ್ ನ ಸುತ್ತಲೂ ಸಾಹಿತಿಗಳು, ಸ್ವಾತಂತ್ರ್ಯ ಸೇನಾನಿಗಳು, ಕನ್ನಡ ಹೋರಾಟಗಾರರ ಭಾವಚಿತ್ರಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಫೋಟೋದಿಂದ ಅಲಂಕರಿಸಿದ್ದಾರೆ. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ಕನ್ನಡ ನಾಡಿನ ಸ್ವಾತಂತ್ರ್ಯ ವೀರರ ಫೋಟೋಗಳು ಈ ಬಸ್ನಲ್ಲಿ ರಾರಾಜಿಸುತ್ತಿವೆ.