ಧಾರವಾಡ:ಕೋಟೂರು ಗ್ರಾಪಂ ಉಪಾಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಪ್ರವೀಣ್ ಕಮ್ಮಾರ ಎಂಬುವವರೇ ಹತ್ಯೆಗೀಡಾದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ. ದುಷ್ಕರ್ಮಿಗಳು ಪ್ರವೀಣ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದು, ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರವೀಣ್ ಚಿಕಿತ್ಸೆ ಫಲಕಾರಿಯಾಗದೇ ಎಸ್ಡಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನು ದುಷ್ಕರ್ಮಿಗಳು ಚಾಕು ಇರಿದು ಸ್ಥಳದಿಂದ ಪರಾರಿಯಾಗಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಗರಗ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನು ಪ್ರವೀಣ್ ಕಮ್ಮಾರ ಕೊಲೆ ಹಿನ್ನೆಲೆ ಎಸ್ಡಿಎಂ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಕೆಳಹಂತದ ಕಾರ್ಯಕರ್ತನ ಹತ್ಯೆ ಆಗಿದೆ. ಇದು ರಾಜಕೀಯ ಕೊಲೆ, ಇದೊಂದು ದುರ್ದೈವ. ಮೊದಲು ಯೋಗೇಶ ಗೌಡರ ಕೊಲೆ ಆಗಿತ್ತು. ಅದು ತನಿಖೆ ಸಹ ಆಗ್ತಿದೆ. ಈಗ ಪ್ರವೀಣ್ ಕಮ್ಮಾರ ಕೊಲೆ ಆಗಿದೆ. ಶಾಸಕ ಅಮೃತ ದೇಸಾಯಿ ಅವರು ಪ್ರವೀಣ್ ಅವರಿಗೆ ಎಚ್ಚರದಿಂದ ಇರಲು ಹೇಳಿದ್ದರು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಆರೋಪಿತರ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.