ಹುಬ್ಬಳ್ಳಿ: ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಸಿಕ್ಕಿದೆ. ಹಾಗಾಗಿ ಅಲ್ಲಿನ ಸ್ಥಳೀಯ ಹಿತಾಸಕ್ತಿಗೆ ಅನುಗುಣವಾಗಿ ಚುನಾವಣೆಗಳು ನಡೆದಿರುತ್ತವೆ ಎಂದು ಮಾಜಿ ಸಿಎಂ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಕುರಿತಂತೆ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈಯುಕ್ತಿಕ ಹಾಗೂ ವ್ಯಕ್ತಿಗತವಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆಯುತ್ತವೆ. ಬೇರೆ ಬೇರೆ ನಗರಸಭೆ ಮತ್ತು ಪುರಸಭೆಗಳಲ್ಲಿ ನಮ್ಮ ಸ್ಥಾನಗಳ ಪ್ರಮಾಣ ಹೆಚ್ಚಾಗಿದೆ. ವಿಧಾನಪರಿಷತ್ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನ ಗಳಿಸಿದ್ದೇವೆ. ಹಾಗಾಗಿ ನಮ್ಮ ಪಕ್ಷ ಕಳೆದ ಬಾರಿಗಿಂತಲೂ ಹೆಚ್ಚು ಪ್ರಗತಿ ಸಾಧಿಸಿದೆ ಎಂದರು.
ಬಿಜೆಪಿ ಶಾಸಕರಿದ್ದ ಕಡೆಗೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಶಾಸಕರಿದ್ದ ಕಡೆಗೆ ಅವರು ಹೆಚ್ಚಿನ ಸ್ಥಾನ ಗೆದ್ದಿದ್ದಾರಾ ಎಂದು ಮರುಪ್ರಶ್ನೆ ಮಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಈ ರೀತಿಯ ಫಲಿತಾಂಶ ಸಹಜ. ಈ ಕುರಿತು ಪರಾಮರ್ಶೆ ಮಾಡುತ್ತೇವೆ ಎಂದು ಹೇಳಿದರು.
ಅರವಿಂದ ಬೆಲ್ಲದ ರಾಜೀನಾಮೆ ವಿಷಯ ಗೊತ್ತಿಲ್ಲ:
ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶಾಸಕ ಅರವಿಂದ ಬೆಲ್ಲದ ರಾಜೀನಾಮೆ ಕೊಟ್ಟಿರುವ ವಿಷಯ ನನಗೆ ಗೊತ್ತಿಲ್ಲ. ನನ್ನ ಅಸಮಾಧಾನದ ಕಾರಣಕ್ಕೆ ಅವರು ರಾಜೀನಾಮೆ ಕೊಟ್ಟಿದ್ದಾರೆಂಬುದು ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಸಂಪುಟದಲ್ಲಿ ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕೆಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ವೈಯುಕ್ತಿಕ ವಿಚಾರಗಳನ್ನು ಹೇಳುತ್ತಿದ್ದಾರೆ. ಎಲ್ಲರಿಗೂ ಮುಕ್ತವಾಗಿ ಅಭಿಪ್ರಾಯ ಹೇಳಲು ಅವಕಾಶವಿದೆ. ಈ ರೀತಿ ಹೇಳಿಕೆ ನಿಡೋದು ಪಕ್ಷ ವಿರೋಧಿ ಚಟುವಟಿಕೆ ಎನ್ನಲಾಗಲ್ಲ. ನನ್ನ ವೈಯಕ್ತಿಕ ಅಭಿಪ್ರಾಯವನ್ನು ಪಕ್ಷದ ಆಂತರಿಕ ಸಭೆಯಲ್ಲಿ ವ್ಯಕ್ತಪಡಿಸಿದ್ದೇನೆ ಎಂದು ಶೆಟ್ಟರ್ ತಿಳಿಸಿದರು.
ಕೋರ ಕಮಿಟಿ ಸಭೆ ರದ್ದು ವಿಚಾರ :
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಕೂಡಾ ಬೇಗನೆ ದೆಹಲಿಗೆ ಪ್ರಯಾಣ ಬೆಳೆಸಿದರು. ಈ ಕಾರಣದಿಂದ ಕೋರ್ ಕಮಿಟಿ ಸಭೆ ನಡೆಸಲಾಗಲಿಲ್ಲ. ಮುಂದಿನ ದಿನಗಳಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗುವುದು ಎಂದು ಶೆಟ್ಟರ್ ಹೇಳಿದರು.
ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಮಂಕಾದ ಬಿಜೆಪಿ, ಚಿಗುರಿದ ಕಾಂಗ್ರೆಸ್, ಜೆಡಿಎಸ್ ಧೂಳಿಪಟ!