ಹುಬ್ಬಳ್ಳಿ:ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ವಿಳಂಬ ಮಾಡುತ್ತಿರುವದನ್ನು ಖಂಡಿಸಿ ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ನಿಯೋಗ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದರು. ಈದ್ಗಾ ಮೈದಾನಲ್ಲಿ ಅನುಮತಿ ವಿಳಂಬಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕ ಅರವಿಂದ ಬೆಲ್ಲದ ನೇತೃತ್ವದ ನಿಯೋಗ ಕೂಡಲೇ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಇಲ್ಲಿಂದ ಎದ್ದು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈದ್ಗಾ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಮುಂಚೆಯೇ ಅನುಮತಿ ನೀಡಬೇಕು. ಪಾಲಿಕೆ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ವಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಬೆಲ್ಲದ್ ಆಕ್ರೋಶ ಹೊರಹಾಕಿದರು. ಅಂಜುಮನ್ ಸಂಸ್ಥೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡಬಾರದು ಎಂದು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ವಿಚಾರಣೆಗೆ ಬರಲಿದೆ. ತೀರ್ಪು ಬರುವ ಮುನ್ನವೇ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಬಿಜೆಪಿ ಪಾಲಿಕೆ ಸದಸ್ಯರು ಒತ್ತಡ ಹಾಕುತ್ತಿದ್ದಾರೆ.
ಈ ಸಂಬಂಧ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪಾಲಿಕೆಯ ಆವರಣದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಅನುಮತಿಗಾಗಿ ಮಹಿಳೆಯರೂ ಒತ್ತಾಯಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡುತಿಲ್ಲ. ಪಾಲಿಕೆ ಆಯುಕ್ತರು ಸಿಎಂ ಕೈಗೊಂಬೆಯಾಗಿದ್ದಾರೆ ಎಂದು ಅರವಿಂದ ಬೆಲ್ಲದ್ ಆರೋಪಿಸಿದರು.