ಧಾರವಾಡ: ಪೌರತ್ವ ಕಾಯಿದೆ ಜಾರಿ ಬಹಳ ಸರಳ ಅಂತಾ ಮೋದಿ ಸರ್ಕಾರ ತಿಳಿದುಕೊಂಡಿತ್ತು. ಆದ್ರೆ ಜನರ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಕೆಲಸಕ್ಕೆ ಕೇಂದ್ರ ಸರ್ಕಾರ ಹೋಗಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರ ಪ್ರತಿಭಟನೆ ಹತ್ತಿಕ್ಕುವುದು ಡಿಕ್ಟೇಟರ್‌ಶಿಪ್ ಇದ್ದಂತೆ: ಬಸವರಾಜ ಹೊರಟ್ಟಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಜನ್ಮಸಿದ್ಧ ಹಕ್ಕು. ಇದನ್ನು ಹತ್ತಿಕ್ಕುವುದು ಡಿಕ್ಟೇಟರ್‌ಶಿಪ್ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾನೂನು ತರುವ ಮೊದಲು ಸಾಧಕ-ಬಾಧಕಗಳ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಆದರೆ ಕೇಂದ್ರ ಸರ್ಕಾರ ನಮ್ಮನ್ನು ಯಾರೂ ಕೇಳುವವರಿಲ್ಲ ಎಂಬ ಭಾವನೆಯಲ್ಲಿದೆ. ಆ ಕಾಯಿದೆಯಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇದೆ. ಆದರೆ ಇಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷ ರಾಜಕಾರಣ ಕಾಣುತ್ತಿದೆ ಎಂದರು.
ಯಾರಾದರೂ ಕಾನೂನು ಮೀರಿ ನಡೆದರೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಹೋರಾಟ ಮಾಡುವುದೇ ಬೇಡ ಎಂದರೆ ಹೇಗೆ? ನಾಳೆ ಬದುಕುವುದು ಬೇಡ, ಊಟ ಮಾಡುವುದು ಬೇಡ, ನೀರು ಕುಡಿಯುವುದು ಬೇಡ ಅಂತಾನೂ ಅನ್ನಬಹುದು ಎಂದು ಬಸವರಾಜ ಹೊರಟ್ಟಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ರು.