ಹುಬ್ಬಳ್ಳಿ:''ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ಮತಯಾಚನೆ ಮಾಡಿದ್ದು ಖುಷಿ ತಂದಿದೆ. ರೋಡ್ ಶೋ ವೇಳೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಾನು ಪ್ರಚಾರಕ್ಕೆ ಬಂದಿರುವ ಬಗ್ಗೆ ಟ್ರೋಲ್ ಮಾಡುವವರ ಬಗ್ಗೆ ನಾ ಏನೂ ಮಾತನಾಡಲ್ಲ'' ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ನಗರದಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ರೋಡ್ ಶೋ ನಡೆಸಿ ಮಾತನಾಡಿ, ''ಯಾತಕ್ಕೆ ಟ್ರೋಲ್ ಮಾಡಬೇಕು, ಟ್ರೋಲ್ ಮಾಡುವವರು ತಮ್ಮ ಮನಸ್ಸಿಗೆ ಪ್ರಶ್ನೆ ಮಾಡಿಕೊಳ್ಳಿ ಇದು ಸರಿನಾ ಅಂತಾ ಯೋಚಿಸಲಿ'' ಎಂದು ಟ್ರೋಲ್ ಮಾಡುವವರ ವಿರುದ್ಧ ಶಿವಣ್ಣ ಸಿಟ್ಟಾದರು. ''ಇವತ್ತು ರೋಡ್ ಶೋನಲ್ಲಿ ಇಷ್ಟೊಂದು ಜನ ಬಂದಿದ್ದಾರೆ. ಇವರೆಲ್ಲ ಟ್ರೋಲ್ ಮಾಡಲಿಕ್ಕೆ ಬಂದಿದ್ದಾರೆಯೇ. ಇಲ್ಲಿ ಬಂದವರೆಲ್ಲ ಕಾಂಗ್ರೆಸ್‌ನವರಲ್ಲ, ಬಿಜೆಪಿಯವರು ಇದ್ದಾರೆ ಹಾಗೂ ಪಕ್ಷೇತರರು ಇದ್ದಾರೆ. ಇವತ್ತು ನಮ್ಮ ಕರ್ತವ್ಯವನ್ನು ನಾವು ಮಾಡಲಿಕ್ಕೆ ಬಂದಿದ್ದೇವೆ. ಇದಕ್ಕೆ ಜನರು ಉತ್ತಮ ಪ್ರೀತಿ ತೋರಿಸುತ್ತಿದ್ದಾರೆ'' ಎಂದರು.
ಹುಬ್ಬಳ್ಳಿಗೂ ನಮಗೂ ಒಳ್ಳೆಯ ಸಂಬಂಧ:''ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ವ್ಯಕ್ತಿತ್ವ ಇರುತ್ತದೆ. ಐಡಿಯಾಲಜಿ ಇರುತ್ತದೆ. ಅವರದ್ದೇ ಕೆಲವು ಆಸೆಗಳು ಇರ್ತಾವೆ. ಅದಕ್ಕಾಗಿ ಬಂದಿರುತ್ತೇವೆ. ಅದನ್ನು ಬಿಟ್ಟು ನಾವು ಯಾರನ್ನ ದೋಷಿಸಲು ಇಲ್ಲಿಗೆ ಬಂದಿಲ್ಲ. ಟ್ರೋಲ್ ಮಾಡುವ ಅವಶ್ಯಕತೆ ಇಲ್ಲ. ಯಾತಕ್ಕೆ ಮಾಡಬೇಕು, ಮನುಷ್ಯನ ಅರ್ಥ ಮಾಡಿಕೊಂಡರೆ ಸಾಕು. ಎಷ್ಟು ದಿನ ಟ್ರೋಲ್ ಮಾಡ್ತಿರಿ, ಮನುಷ್ಯ ಯಶಸ್ವಿ ಆಗಬೇಕಾದ್ರೆ ಹಾರ್ಟ್ ಮತ್ತು ಮೆದುಳು ಮೊದಲು ಸರಿಯಾಗಿರಬೇಕು. ಮೊದಲು ನಿಮ್ಮ ಹೃದಯವನ್ನ ಕೇಳಿ ಆ ಮೇಲೆ ಟ್ರೋಲ್ ಮಾಡಿ. ಹುಬ್ಬಳ್ಳಿಗೂ ನಮಗೂ ಒಳ್ಳೆಯ ಸಂಬಂಧ ಇದೆ. ಇಷ್ಟು ದಿನ ಸಿನಿಮಾ ಪ್ರಚಾರಕ್ಕಾಗಿ ಬರ್ತಾ ಇದ್ದೆ. ಇವತ್ತು ಪ್ರಚಾರಕ್ಕಾಗಿ ಬಂದಿದ್ದೇನೆ ಎಂದು ಅವರು ತಿಳಿಸಿದರು.