ಧಾರವಾಡ: ಸರ್ಕಾರದ ಸೂಚನೆಯಂತೆ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಒಟ್ಟು ಹಾಸಿಗೆಗಳ ಪೈಕಿ ಶೇ.50 ರಷ್ಟನ್ನು ಕಡ್ಡಾಯವಾಗಿ ಮೀಸಲಿಡದ ಆಸ್ಪತ್ರೆಗಳ ವಿರುದ್ದ ಜಿಲ್ಲಾಡಳಿತ ನೋಟೀಸ್ ಜಾರಿ ಮಾಡಿದೆ.
ಕೋವಿಡ್ ಚಿಕಿತ್ಸೆಗಾಗಿ ಪೂರೈಸಲು ಜಿಲ್ಲಾಡಳಿತದಿಂದ ಏಪ್ರಿಲ್ 15 ರಂದು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ಜರುಗಿಸಿ ನಿರ್ದೇಶನ ನೀಡಲಾಗಿತ್ತು. ಆದರೆ, ಸರ್ಕಾರದ ಈ ಆದೇಶವನ್ನು ಉಲ್ಲಂಘಿಸಿರುವ ಹುಬ್ಬಳ್ಳಿಯ ಪ್ರಮುಖ ಮೂರು ಆಸ್ಪತ್ರೆಗಳಾದ ಶಕುಂತಲಾ ಮೆಮೋರಿಯಲ್ ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್, ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಹಾಗೂ ತತ್ವದರ್ಶ ಹಾಸ್ಪಿಟಲ್ ಎ ಯುನಿಟ್ ಆಫ್ ತತ್ವದರ್ಶಾ ಹೆಲ್ತ್ ಕೇರ್ ಸೂಲ್ಯುಷನ್ಸ್ ಆಸ್ಪತ್ರೆಗಳಿಗೆ ಸಾಂಕ್ರಾಮಿಕ ರೋಗ ಕಾಯ್ದೆ-1987 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-2005 ರನ್ವಯ 24 ಗಂಟೆಯಲ್ಲಿ ಉತ್ತರ ನೀಡುವಂತೆ ತಿಳಿಸಿ, ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿಯ ಶಕುಂತಲಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 75 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 31 ಜನ ಕೋವಿಡ್ ದೃಢಪಟ್ಟವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದರು. ಆದರೆ, ಏ.25 ರಂದು ಜಿಲ್ಲಾ ಆರೋಗ್ಯಾಧಿಕಾರಿ ಶಕುಂತಲಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇವಲ 6 ಜನ ಕೋವಿಡ್ ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು, ಕೋವಿಡ್-19 ಅಲ್ಲದ ಪ್ರಕರಣಗಳನ್ನು ಕೂಡಾ ಕೋವಿಡ್-19 ಎಂದು ಪರಿಗಣಿಸಿ ಹಾಗೂ ಜಿಲ್ಲಾಡಳಿತಕ್ಕೆ ಒಟ್ಟು 31 ಜನ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು (ಸ್ಪ್ರೆಡ್‍ಶೀಟ್‍ನಲ್ಲಿ) ತಪ್ಪು ಮಾಹಿತಿ ನೀಡಿದೆ.
ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‍ನಲ್ಲಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 26 ಹಾಸಿಗೆಗಳನ್ನು ಮೀಸಲಿಡಲಾಗಿದ್ದು, 26 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಮಾಹಿತಿ ನೀಡಲಾಗಿತ್ತು. ಏ.27 ರಂದು ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿದ ಸಂದರ್ಭದಲ್ಲಿ ಕೇವಲ ಕೋವಿಡ್-19 ದೃಢಪಟ್ಟ 6 ಜನರಿಗೆ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದೆ. ಮತ್ತು ಒಟ್ಟು 26 ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು (ಸ್ಪ್ರೆಡ್‍ಶೀಟ್‍ನಲ್ಲಿ) ತಪ್ಪು ಮಾಹಿತಿ ನೀಡಿದೆ.
ತತ್ವದರ್ಶ ಆಸ್ಪತ್ರೆಯು 150 ಹಾಸಿಗೆಗಳಿಗೆ ಅನುಮತಿ ಪಡೆದಿದ್ದು, ಇದರಲ್ಲಿ ಶೇ.50 ರಷ್ಟು ಅಂದರೆ 75 ಹಾಸಿಗೆಗಳನ್ನು ಕೋವಿಡ್-19 ಸೋಂಕಿತರಿಗೆ ಮೀಸಲಿಡಬೇಕು. ಆದರೆ ತತ್ವದರ್ಶ ಆಸ್ಪತ್ರೆಯವರು ಕೋವಿಡ್-19 ದೃಢಪಟ್ಟ ಪ್ರಕರಣಗಳ ಲ್ಯಾಬೋರೇಟರಿ ಫಲಿತಾಂಶ ಇಲ್ಲದೇ ಕೋವಿಡ್-19 ಪ್ರಕರಣಗಳೆಂದು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದನ್ನು ಏ.26 ರಂದು ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ಸಂದರ್ಭದಲ್ಲಿ ಕಂಡು ಬಂದಿದೆ.
ಈ ಮೂರು ಆಸ್ಪತ್ರೆಗಳಲ್ಲಿ ಸರ್ಕಾರದ ನಿರ್ದೇಶನದಂತೆ ಕೋವಿಡ್ ಚಿಕಿತ್ಸೆಗಾಗಿ ಸರ್ಕಾರವು ನಿರ್ಧರಿಸಿರುವ ದರಪಟ್ಟಿಯನ್ನು ಆಸ್ಪತ್ರೆಯ ಮುಂಭಾಗದ ಪ್ರಮುಖ ಸ್ಥಳದಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಪ್ರಕಟಿಸಬೇಕು. ಆರೋಗ್ಯಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಈ ನಿರ್ದೇಶನದ ಸ್ಪಷ್ಟ ಉಲ್ಲಂಘನೆ ಕಂಡು ಬಂದಿದೆ ಮತ್ತು ಜಿಲ್ಲಾಡಳಿತಕ್ಕೆ ಕೋವಿಡ್-19 ಸೋಂಕಿತರ ಚಿಕಿತ್ಸೆ ನೀಡುತ್ತಿರುವ ಕುರಿತು ಹಾಗೂ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಟ್ಟಿರುವುದಾಗಿ ತಪ್ಪು ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿರುವುದನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಗಂಭೀರವಾಗಿ ಪರಿಗಣಿಸಿದ್ದಾರೆ.
ಕೆಪಿಎಂಇ ಕಾಯ್ದೆ ಪ್ರಕಾರ ಆಸ್ಪತ್ರೆ ಮುಂಭಾಗದಲ್ಲಿ ರೋಗಿಗಳಿಗೆ ವಿಧಿಸುವ ದರಪಟ್ಟಿಯನ್ನು ಪ್ರದರ್ಶಿಸದ, ಎಬಿಎಆರ್ ಕೆ ಯೋಜನೆಯ ಮಾಹಿತಿ ಹಾಗೂ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಆಸ್ಪತ್ರೆ ಮುಂಭಾಗದಲ್ಲಿ ಪ್ರದರ್ಶಿಸದ ಮತ್ತು ಕೋವಿಡ್-19 ಶಿಷ್ಟಾಚಾರ ಉಲ್ಲಂಘಿಸಿರುವ ಕಾರಣಕ್ಕಾಗಿ ಮುಂದಿನ 24 ಗಂಟೆಗಳಲ್ಲಿ ಈ ಮೂರು ಆಸ್ಪತ್ರೆಗಳು ಸೂಕ್ತ ಕಾರಣ ನೀಡಬೇಕು. ಇಲ್ಲದಿದ್ದಲ್ಲಿ, ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.
ಶೇ.50 ರಷ್ಟು ಹಾಸಿಗೆ ಮೀಸಲಿಡದ ಹುಬ್ಬಳ್ಳಿಯ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ
ಈ ಆಸ್ಪತ್ರೆಗಳಿಗೆ ಸಾಂಕ್ರಾಮಿಕ ರೋಗ ಕಾಯ್ದೆ-1987 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-2005 ರನ್ವಯ 24 ಗಂಟೆಯಲ್ಲಿ ಉತ್ತರ ನೀಡುವಂತೆ ತಿಳಿಸಿ, ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಹುಬ್ಬಳ್ಳಿ
ಇಲ್ಲಿಯವರೆಗೆ ಕೋವಿಡ್-19 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾದ ವಿವರವಾದ ಮಾಹಿತಿ, ರೋಗಿಗಳಿಗೆ ವಿಧಿಸಿರುವ ಬಿಲ್ಲಿನ ಸಂಪೂರ್ಣ ಮಾಹಿತಿ, ಕೋವಿಡ್-19 ಸೋಂಕು ದೃಢಪಟ್ಟ ಎಸ್.ಆರ್.ಎಫ್. ಐಡಿಯೊಂದಿಗೆ ಪ್ರಯೋಗಾಲಯದ ಫಲಿತಾಂಶದ ಪ್ರತಿ (ಪ್ರತಿ ಪ್ರಕರಣಕ್ಕೆ ಅನ್ವಯವಾಗುವಂತೆ) ಸಲ್ಲಿಸಬೇಕು. ಹಾಗೂ ಸ್ಪ್ರೆಡ್‍ಶೀಟ್‍ನಲ್ಲಿ ತೋರಿಸಿರುವ ಪ್ರಕಾರ ಕೋವಿಡ್-19 ಪ್ರಕರಣಗಳ ಸಂಪೂರ್ಣ ಮಾಹಿತಿ ಎಸ್.ಆರ್.ಎಫ್. ಐಡಿಯೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸಲ್ಲಿಸಬೇಕೆಂದು ಅವರು ಸೂಚಿಸಿದ್ದಾರೆ.